ರೀಲ್ಸ್ ವಿಡಿಯೋ ಶೇರಿಂಗ್ನಲ್ಲಿ ಶುರುವಾದ ಸ್ನೇಹ-ಸಂಬಂಧ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ತಿರುವನಂತಪುರದ ಕದೀನಂಕುಲಂನಲ್ಲಿ ಸಂಭವಿಸಿದೆ. ಪ್ರಿಯಕರನ ಮಾನಸಿಕ ಹಿಂಸೆಯಿಂದ ದೂರವಾಗಲು ಬಯಸಿದ ಅತಿರಾ (33) ಎಂಬ ಮಹಿಳೆ ಬರ್ಬರವಾಗಿ ಹತ್ಯೆಯಾದ ಘಟನೆ ಸದ್ಯ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.
ಇನ್‌ಸ್ಟಾಗ್ರಾಮ್ ರೀಲ್
ಸ್ನೇಹದ ಹೆಸರಿನಲ್ಲಿ ವಿವಾಹವಾಗಿದ್ದ ರೀಲ್ಸ್ ಸ್ನೇಹಿತೆಯ ಜತೆ ಲವ್ವಿ-ಡವ್ವಿ ನಡೆಸಲು ಬಯಸಿದ್ದ ವ್ಯಕ್ತಿ, ತಾನು ಅಂದುಕೊಂಡಿದ್ದು ಈಡೇರುತ್ತಿಲ್ಲ ಎಂಬ ಹತಾಶೆಯಲ್ಲಿ ಮಹಿಳೆಯ ಮನೆಗೆ ನುಗ್ಗಿ, ಚಾಕುವಿನಿಂದ ಅವಳಿಗೆ ತಿವಿದು ಭೀಕರವಾಗಿ ಕೊಲೆಗೈದಿದ್ದಾನೆ. ಹತ್ಯೆಯಲ್ಲಿ ತನ್ನ ಕೈವಾಡ ಮರೆಮಾಚಲು ಎಲ್ಲಾ ಪ್ಲ್ಯಾನ್ಗಳನ್ನು ಯಶಸ್ವಿಯಾಗಿ ಮಾಡಿ, ಸ್ಥಳದಿಂದ ಪರಾರಿಯಾದ ಕಿಡಿಗೇಡಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದೇ ರೋಚಕ. ಆರೋಪಿ ಜಾನ್ಸನ್ ಸುಮಾರು ಒಂದು ವರ್ಷದಿಂದ ಅತಿರಾ ಜತೆ ನಿಕಟ ಸಂಬಂಧ ಹೊಂದಿದ್ದನು. ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್‌ಗಳನ್ನು ಪರಸ್ಪರ ಹಂಚಿಕೊಳ್ಳುವ ಮೂಲಕ ಇಬ್ಬರ ಸ್ನೇಹ ಪ್ರಾರಂಭವಾಗಿ, ಮತ್ತಷ್ಟು ಗಟ್ಟಿಯಾಗಿತ್ತು.
ಮಗ-ಗಂಡನನ್ನು ಬಿಟ್ಟು ಬಾ
ಎರಡನೇ ತರಗತಿಯಲ್ಲಿ ಓದುತ್ತಿರುವ ಮಗ ಮತ್ತು ಪತಿಯನ್ನು ತೊರೆದು ತನ್ನೊಂದಿಗೆ ಬರುವಂತೆ ಜಾನ್ಸನ್ ಅತಿರಾಗೆ ಒತ್ತಾಯಿಸುತ್ತಿದ್ದ. ಇದರಿಂದ ಬೇಸತ್ತ ಅತಿರಾ, ಪತಿ ಮತ್ತು ಮಗನನ್ನು ಬಿಟ್ಟು ಬರುವುದಿಲ್ಲ ಎಂದು ವಿರೋಧಿಸಿದ್ದಳು. ಇದಕ್ಕೆ ಸಿಟ್ಟಾದ ಕಿಡಿಗೇಡಿ, ಆಕೆಯನ್ನು ಬೆದರಿಸಿ ಹಲವು ಬಾರಿ ಹಣ ಸುಲಿಗೆ ಮಾಡಿದ್ದನು. ಅತಿರಾಳಿಂದ ಒಟ್ಟು 1.30 ಲಕ್ಷ ರೂ.ಗಳನ್ನು ಪಡೆದಿದ್ದ ಆರೋಪಿ, ಹತ್ಯೆಗೂ ಮೂರು ದಿನಗಳ ಮೊದಲು ಅತಿರಾಳಿಂದ ತನ್ನ ಖಾತೆಗೆ 2,500 ರೂ.ಗಳನ್ನು ಪಡೆದಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಕಳೆದ ಐದು ತಿಂಗಳಲ್ಲಿ ಆತ ಹಲವು ಬಾರಿ ಅತಿರಾ ನೋಡಲು ಕಡಿನಾಮಕುಲಂಗೆ ಭೇಟಿ ನೀಡಿದ್ದ.
ಹೆದರಿ ವಿಷ ಕುಡಿದ
ಕೊಲೆಗೆ ಐದು ದಿನಗಳ ಮೊದಲು ಪೆರುಮತುರಾದ ಲಾಡ್ಜ್‌ನಲ್ಲಿ ಉಳಿದುಕೊಂಡಿದ್ದ ಆರೋಪಿ, ಅತಿರಾಳನ್ನು ಬರ್ಬರವಾಗಿ ಹತ್ಯೆಗೈದ ಮರುಕ್ಷಣವೇ ಆ ರೂಮ್ ಖಾಲಿ ಮಾಡಿದ್ದ. ಆಕೆಯ ಮನೆಯಿಂದ ಓಡಿ ಹೋಗಲು ಅತಿರಾಳ ಸ್ಕೂಟರ್ ಅನ್ನೇ ಬಳಸಿಕೊಂಡು ಅಲ್ಲಿಂದ ಪರಾರಿಯಾಗಿದ್ದ.
ನಂತರ, ಚಿರಯಿನ್‌ಕೀಳು ರೈಲು ನಿಲ್ದಾಣ ತಲುಪಿದ ಆರೋಪಿ, ರೈಲು ಹತ್ತಿ ರಾಜ್ಯದ ಗಡಿ ದಾಟಿ ಹೋಗಿದ್ದ ಎಂದು ವರದಿಯಾಗಿದೆ. ಅತಿರಾ ಪತಿ ರಾಜೇಶ್ ಪೊಲೀಸರಿಗೆ ಜಾನ್ಸನ್ ಬಗ್ಗೆ ಮಾಹಿತಿ ನೀಡಿದ್ದು, 7 ತಿಂಗಳ ಹಿಂದೆಯೇ ಈತನ ಕುರಿತು ನನ್ನ ಪತ್ನಿ ಹಲವು ವಿಷಯಗಳನ್ನು ಹಂಚಿಕೊಂಡಿದ್ದಳು ಎಂಬುದನ್ನು ಬಹಿರಂಗಪಡಿಸಿದ್ದಾರೆ. ತಕ್ಷಣವೇ ಈ ಸಂಬಂಧ ದೂರು ದಾಖಲಿಸಿಕೊಂಡ ಖಾಕಿ ಪಡೆ, ಆರೋಪಿಯ ಬಂಧನಕ್ಕೆ ಬಲೆ ಬೀಸಿತ್ತು.
ಮಹಿಳೆಯನ್ನು ಕೊಲೆಗೈದ ಬಳಿಕ ಖಾಕಿ ನೆರಳಿನಿಂದ ತಲೆಮರಿಸಿಕೊಂಡಿದ್ದ ಆರೋಪಿ, ಸುಳಿವು ಸಿಗದಂತೆ ಪರಾರಿಯಾಗಿದ್ದ. ಆದರೆ, ಆತನ ಮೊಬೈಲ್ ನಂಬರ್ ಟ್ರ್ಯಾಕ್ ಮಾಡ್ತಿದ್ದ ಪೊಲೀಸರಿಗೆ ಆರೋಪಿ ಕೊಟ್ಟಾಯಂನಲ್ಲಿರುವುದು ಗೊತ್ತಾಗಿದೆ. ತಕ್ಷಣವೇ ಜಾನ್ಸನ್ನನ್ನು ಬಂಧಿಸಿ, ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಂಧನದ ವೇಳೆ ತಾನು ವಿಷ ಸೇವಿಸಿರುವುದಾಗಿ ಹೇಳಿಕೊಂಡ ಹಿನ್ನೆಲೆ ಪೊಲೀಸರು ಆರೋಪಿಯನ್ನು ಆಸ್ಪತ್ರೆಗೆ ರವಾನಿಸಿ, ಪರೀಕ್ಷೆಗೆ ಒಳಪಡಿಸಿದ್ದಾರೆ ಎಂದು ವರದಿಯಾಗಿದೆ,(