ಪುತ್ತೂರು: ಸಹಕಾರಿ ಪಿತಾಮಹ ಮೊಳಹಳ್ಳಿ ಶಿವರಾಯ ಅವರಿಂದ ಸ್ಥಾಪನೆಯಾದ, ೧೧೫ ವರ್ಷಗಳ ಇತಿಹಾಸವಿರುವ ಪುತ್ತೂರು ಕೋ ಆಪರೇಟಿವ್ ಟೌನ್ ಬ್ಯಾಂಕ್‌ನ ಮುಂದಿನ ೫ ವರ್ಷಗಳ ನೂತನ ಆಡಳಿತ ಮಂಡಳಿ ಆಯ್ಕೆಗಾಗಿ ಜ.೨೫ರಂದು ಚುನಾವಣೆ ನಡೆಯಲಿದೆ. ಈ ಹಂತದಲ್ಲಿ ಕೇವಲ ರಾಜಕೀಯ ಕಾರಣಕ್ಕೆ ಸಂಘದ ಹಿಂದಿನ ಆಡಳಿತ ಮತ್ತು ಸಹಕಾರ ಭಾರತಿಯ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಲಾಗುತ್ತಿದೆ. ಇದರಲ್ಲಿ ಯಾವುದೇ ಹುರುಳಿಲ್ಲ. ಕಳೆದ ಆಡಳಿತ ಮಂಡಳಿ ಅವಧಿಯಲ್ಲಿ ಕೈಗೊಳ್ಳಲಾದ ಎಲ್ಲ ನಿರ್ಧಾರಗಳು ಕಾನೂನು ಬದ್ಧವಾಗಿಯೇ ಇದ್ದವು ಎಂದು ಸಹಕಾರ ಭಾರತಿ ಮತ್ತು ಬಿಜೆಪಿ ಮುಖಂಡರು ಹಾಗೂ ಬ್ಯಾಂಕಿನ ನಿಕಟಪೂರ್ವ ಅಧ್ಯಕ್ಷ ಕಿಶೋರ್ ಕೊಳತ್ತಾಯ ಅವರು  ಹೇಳಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ನಗರ ಮಂಡಲ ಅಧ್ಕಕ್ಷರಾದ ಶಿವಕುಮಾರ್ ಪಿ.ಬಿ., ಪುತ್ತೂರು ಸಹಕಾರ ಭಾರತಿ ಅಧ್ಯಕ್ಷರಾದ ಕೃಷ್ಣಕುಮಾರ್ ರೈ ಕೆದಂಬಾಡಿಗುತ್ತು ಮತ್ತು ಬ್ಯಾಂಕಿನ ನಿಕಟಪೂರ್ವ ಅಧ್ಯಕ್ಷರಾದ ಕಿಶೋರ್ ಕೊಳತ್ತಾಯ, ಬ್ಯಾಂಕಿನ ಸದಸ್ಯರೊಬ್ಬರು ಎತ್ತಿದ ಪ್ರಶ್ನೆಗಳಿಗೆಲ್ಲ ಮಹಾಸಭೆಗಳಲ್ಲಿ ಉತ್ತರ ನೀಡಲಾಗಿದೆ. ನಿಯಮ ಪ್ರಕಾರವೇ ನಿರ್ಣಯ ಕೈಗೊಂಡು ಜಾರಿಗೊಳಿಸಲಾಗಿದೆ. ಬ್ಯಾಂಕಿನ ವಿರುದ್ಧ ತನಿಖೆ ನಡೆಸಲು ಸದಸ್ಯರೊಬ್ಬರು ಆರ್‌ಬಿಐಗೆ ನೀಡಿದ ದೂರಿನ ಪ್ರಕಾರ ತನಿಖೆ ನಡೆದು ಅವರ ಅರ್ಜಿ ತಿರಸ್ಕರಿಸಲ್ಪಟ್ಟಿದೆ ಎಂದರು.
ಉAಗುರ ಅಲ್ಲ ಚಿನ್ನದ ಬಿಲ್ಲೆ
ಹಿಂದಿನ ಮಹಾಸಭೆಯಲ್ಲಿ ಕೈಗೊಂಡ ನಿರ್ಣಯದ ಪ್ರಕಾರ ಸಿಬ್ಬಂದಿಗಳಿಗೆ, ಸದಸ್ಯರಿಗೆ ಕೆಲವೊಂದು ಉಡುಗೊರೆ ನೀಡಲಾಗಿದೆ. ಅದು ಜಾರಿಯಾಗಿದ್ದು ಇತ್ತೀಚೆಗೆ ಎಂಬುದು ಕಾಕತಾಳೀತಯ ಮಾತ್ರ. ಆದರೆ ಚಿನ್ನದ ಉಂಗುರ ನೀಡಲಾಗಿದೆ ಎಂಬುವುದು ಸುಳ್ಳು. ಸಿಬಂದಿಗಳಿಗೆ ಚಿನ್ನದ ಬಿಲ್ಲೆ ಕೊಡಲಾಗಿದೆ. ಮಹಾಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಎಲ್ಲ ನಿರ್ಧಾರ ಕೈಗೊಳ್ಳಲಾಗಿದೆ. ಸಿಇಒ ನೇಮಕಾತಿ ವಿಚಾರವೂ ಕಾನೂನುಬದ್ಧವಾಗಿದೆ. ಆರೋಪ ಮಾಡುವ ಸದಸ್ಯರು ಹೇಳುವ ಯಾವುದೇ ವಿಚಾರದಲ್ಲೂ ತನಿಖೆ ನಡೆಯುವುದಿದ್ದರೆ ನಾವು ತನಿಖೆ ಎದುರಿಸಲು ಸಿದ್ಧ ಎಂದರು.
ಮೃತರ ಹೆಸರು ಮತದಾರರ ಪಟ್ಟಿಯಲ್ಲಿ
ಬ್ಯಾಂಕಿನ ಹಿರಿಯ ಸದಸ್ಯರೊಬ್ಬರು ೨೦೨೨ರಲ್ಲಿ ಮೃತಪಟ್ಟಿದ್ದು, ಪ್ರಸ್ತುತ ಚುನಾವಣೆಯ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಈಗಲೂ ಇದೆ. ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗುತ್ತಿದೆ. ಈ ವಿವಾದಕ್ಕೆ ಪ್ರತಿಕ್ರಿಯೆ ನೀಡಿದ ನಿಕಟಪೂರ್ವ ಅಧ್ಕಕ್ಷರಾದ ಕಿಶೋರ್ ಕೊಳತ್ತಾಯ, ನಿಧನಗೊಂಡ ಸದಸ್ಯರ ಕಾನೂನುಬದ್ಧ ಹಕ್ಕುದಾರರು ಅರ್ಜಿ ಸಲ್ಲಿಸಿದರೆ ಮಾತ್ರ ನಾವು ಅವರ ಹೆಸರನ್ನು ತೆಗೆಯಲು ಸಾಧ್ಯ. ಅಂಥ ಯಾವುದೇ ಅರ್ಜಿ ಬಾರದ ಹಿನ್ನೆಲೆಯಲ್ಲಿ ಹೆಸರು ಉಳಿದುಕೊಂಡಿದೆ ಎಂದರು.
೨೦೨೨ರಲ್ಲಿ ಆ ಸದಸ್ಯರು ನಿಧನರಾದ ಕಾರಣ ಸತತ ೩ ಮಹಾಸಭೆಗಳಲ್ಲಿ ಭಾಗವಹಿಸದ ಹಿನ್ನೆಲೆಯಲ್ಲಿ ಅವರ ಹೆಸರು ಪರಿಷ್ಕೃತ ಮತದಾರರ ಪಟ್ಟಿಯಲ್ಲಿ ಇರಬಾರದಿತ್ತು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ೨೦೨೩ರಲ್ಲಿ ಬ್ಯಾಂಕಿನ ಬೈಲಾ ತಿದ್ದುಪಡಿಯಾಗಿದ್ದು, ಅದರ ಪ್ರಕಾರ ಮತದಾರರ ಪಟ್ಟಿ ತಯಾರಿಸಲಾಗಿದೆ. ಆದರೂ ಇದೀಗ ಮೃತರ ಹೆಸರು ಪಟ್ಟಿಯಲ್ಲಿರುವ ವಿಚಾರ ವಿವಾದವಾಗಿರುವ ಕಾರಣ ಅವರ ಕಾನೂನು ಬದ್ಧ ಹಕ್ಕುದಾರರನ್ನು ಸಂಪರ್ಕಿಸಿ ಅಧಿಕೃತ ಮಾಹಿತಿ ಪಡೆದು ಮತದಾರರ ಪಟ್ಟಿಯಿಂದ ಹೆಸರು ತೆಗೆಯಲಾಗುವುದು ಎಂದರು.
ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷರಾದ ದಯಾನಂದ ಶೆಟ್ಟಿ ಉಜಿರೆಮಾರ್, ಪಕ್ಷದ ಮುಖಂಡರಾದ ರಾಜೇಶ್ ಬನ್ನೂರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You missed

Join WhatsApp Group
error: Content is protected !!