60 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಅಮೆರಿಕನ್ ಏರ್‌ಲೈನ್ಸ್ ಜೆಟ್ ವಿಮಾನವು ಸೇನಾ ಹೆಲಿಕಾಪ್ಟರ್‌ಗೆ ಡಿಕ್ಕಿ ಹೊಡೆದಿದ್ದು, ಅತ್ಯಂತ ಭೀಕರ ಅಪಘಾತದಲ್ಲಿ ವಿಮಾನ ಮತ್ತು ಹೆಲಿಕಾಪ್ಟರ್ ನಲ್ಲಿ ಎಲ್ಲಾ ಪ್ರಯಾಣಿಕರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಬುಧವಾರ ರಾತ್ರಿ ವಾಷಿಂಗ್ಟನ್ ಬಳಿಯ ರೊನಾಲ್ಡ್ ರೇಗನ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೆಲಿಕಾಪ್ಟರ್ ಲ್ಯಾಂಡ್ ಮಾಡಲು ಯತ್ನಿಸುತ್ತಿದ್ದಾಗ ಜೆಟ್ ವಿಮಾನ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ನಂತರ ಹೆಲಿಕಾಪ್ಟರ್ ಮತ್ತು ವಿಮಾನ ಎರಡೂ ನದಿಯಲ್ಲಿ ಪತನವಾಗಿದ್ದು, ಪೊಟೊಮ್ಯಾಕ್ ನದಿಯ ಹಿಮಾವೃತ ನೀರಿನಿಂದ ಇದುವರೆಗೆ ಕನಿಷ್ಠ 28 ಶವಗಳನ್ನು ಹೊರತೆಗೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ
ಈ ಹಂತದಲ್ಲಿ ಯಾವುದೇ ಪ್ರಯಾಣಿಕರು ಬದುಕುಳಿದಿದ್ದಾರೆ ಎಂಬ ನಾವು ನಂಬುವುದಿಲ್ಲ. ಹೀಗಾಗಿ ನಾವು ಈಗ ರಕ್ಷಣಾ ಕಾರ್ಯಾಚರಣೆಯನ್ನು ಮೃತದೇಹಗಳ ಪತ್ತೆ ಕಾರ್ಯಾಚರಣೆಯಾಗಿ ಬದಲಾಯಿಸುವ ಸ್ಥಿತಿ ನಿರ್ಮಾಣವಾಗಿದೆ ಎಂದು ವಾಷಿಂಗ್ಟನ್ ಅಗ್ನಿಶಾಮಕ ದಳದ ಮುಖ್ಯಸ್ಥ ಜಾನ್ ಡೊನ್ನೆಲ್ಲಿ ಅವರು ಹೇಳಿದ್ದಾರೆ.
ವಿಮಾನವು ಮೂರು ಭಾಗಗಳಾಗಿ ತಲೆಕೆಳಗಾಗಿ ನೀರಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ಹೆಲಿಕಾಪ್ಟರ್‌ನ ಅವಶೇಷಗಳು ಸಹ ಕಂಡುಬಂದಿವೆ. ಇನ್ನೂ ಶವಗಳಿಗಾಗಿ ಹುಡುಕಾಟ ನಡೆದಿದೆ ಎಂದು ಡೊನ್ನೆಲ್ಲಿ ತಿಳಿಸಿದ್ದಾರೆ.
ಅಪಘಾತದ ಹಿಂದಿನ ಕಾರಣವನ್ನು ಅಧಿಕಾರಿಗಳು ಇನ್ನೂ ಖಚಿತಪಡಿಸಿಲ್ಲ. ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ (ಎನ್‌ಟಿಎಸ್‌ಬಿ) ಮತ್ತು ಫೆಡರಲ್ ವಿಮಾನಯಾನ ಆಡಳಿತ (ಎಫ್‌ಎಎ)ದ ತನಿಖಾಧಿಕಾರಿಗಳು ಅಪಘಾತದ ಸ್ಥಳದಲ್ಲಿದ್ದಾರೆ.