ಪುತ್ತೂರು:ಪುತ್ತೂರಿನ ಫಿಲೋಮಿನಾ ಕಾಲೇಜು ಮೈದಾನದಲ್ಲಿ ನಡೆದ ಅಭಿರಾಮ್ ಫ್ರೆಂಡ್ಸ್ ಕ್ಲಬ್ ಪುತ್ತೂರು ಆಯೋಜಿತ ಆಫಿಸರ್ಸ್ ಚಾಂಪಿಯನ್ ಶಿಪ್ ಪಂದ್ಯಾಟದಲ್ಲಿ ಪುತ್ತೂರು ಪ್ರೆಸ್ ಕ್ಲಬ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ, ಪೊಲೀಸ್ ಇಲೆವೆನ್ ರನ್ನರ್ಸ್ ಪ್ರಶಸ್ತಿ ಪಡೆದುಕೊಂಡಿತು,ಫೆ. 02ರಂದು  ನಡೆದ ಹೊನಲು-ಬೆಳಕಿನ ಪಂದ್ಯಾಟದಲ್ಲಿ ಪೋಲೀಸ್ ಇಲೆವೆನ್ ತಂಡವನ್ನು 24 ರನ್ ಅಂತರದಲ್ಲಿ ಮಣಿಸಿದ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ಪೋಲೀಸ್ ಇಲೆವೆನ್ ತಂಡಕ್ಕೆ ಪ್ರೆಸ್ ಕ್ಲಬ್ ಇಲೆವೆನ್ ತಂಡ ನಿಗದಿತ ಐದು ಓವರ್ ಗಳಲ್ಲಿ 51 ರನ್ ಗಳ ಗುರಿಯನ್ನು ನೀಡಿತ್ತು. ಗುರಿ ಬೆನ್ನಟ್ಟಿದ ಪೋಲೀಸ್ ತಂಡ ಪ್ರೆಸ್ ಕ್ಲಬ್ ತಂಡದ ಕರಾರುವಕ್ಕು ಬೌಲಿಂಗ್ ದಾಳಿಗೆ 5 ಓವರ್ ಗಳಿಗೆ ಕೇವಲ 27 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿದೆ. ಪ್ರೆಸ್ ಕ್ಲಬ್ ತಂಡದ ಶರಣ್ ಅವರ ಪ್ರಖರ ದಾಳಿಗೆ ಪೋಲೀಸ್ ತಂಡ ತನ್ನೆಲ್ಲಾ ಪ್ರಮುಖ ವಿಕೆಟ್ ಗಳನ್ನು ಕಳೆದುಕೊಂಡು ಸೋಲನ್ನು ಕಾಣುವಂತಾಯಿತು. ಪಂದ್ಯಾಟದುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ ಪ್ರೆಸ್ ಕ್ಲಬ್ ತಂಡದ ಶರಣ್ ಮ್ಯಾನ್ ಆಫ್ ದಿ ಸಿರೀಸ್ ಮತ್ತು ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಎಂಟು ತಂಡಗಳ ಆಫಿಸರ್ಸ್ ಟ್ರೋಪಿ ಚಾಂಪಿಯನ್ ಶಿಪ್ ನಲ್ಲಿ ಎ ಗ್ರೂಪ್ ನ ಪಂದ್ಯಾಟ ಶನಿವಾರ ನಡೆದಿದ್ದು, ಪ್ರೆಸ್ ಕ್ಲಬ್ ತಂಡ ಬಲಿಷ್ಠ ಪಿಇಟಿ ಇಲೆವೆನ್ ತಂಡವನ್ನು ಮಣಿಸುವ ಮೂಲಕ ಫೈನಲ್ ಪ್ರವೇಶಿಸಿತ್ತು. ಬಿ ಗ್ರೂಪ್ ಗೆ ನಡೆದ ಪಂದ್ಯಾಟದಲ್ಲಿ ಡಾಕ್ಟರ್ಸ್ ಇಲೆವೆನ್ ತಂಡದಿಂದ ವಾಕ್ ಓವರ್ ಪಡೆದುಕೊಂಡಿದ್ದ ಪೋಲೀಸ್ ತಂಡ ಫಾರೆಸ್ಟ್ ಇಲೆವೆನ್ ಮತ್ತು ಮೆಸ್ಕಾಂ ಇಲೆವೆನ್ ತಂಡದ ಮಧ್ಯೆ ನಡೆದ ಪಂದ್ಯಾಟದಲ್ಲಿ ಜಯಗಳಿಸಿದ್ದ ಮೆಸ್ಕಾಂ ತಂಡದ ವಿರುದ್ಧ ಸೆಮಿಫೈನಲ್ ನಲ್ಲಿ ಜಯಗಳಿಸಿ ಫೈನಲ್ ಪ್ರವೇಶಿಸಿತ್ತು. ಪ್ರಶಸ್ತಿಯು ಅಭಿರಾಮ್ ಫ್ರೆಂಡ್ಸ್ ಕ್ಲಬ್ ಆಫಿಸರ್ಸ್ ಚಾಂಪಿಯನ್ ಟ್ರೋಪಿ ಜೊತೆಗೆ ನಗದು ಪ್ರಶಸ್ತಿಯನ್ನೂ ಒಳಗೊಂಡಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!