
ಅಧಿಕ ಬಡ್ಡಿ ಆಮಿಷ ತೋರಿಸಿ ಬಹುಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಎ1 ಆರೋಪಿ ಸೇರಿ ಮೂವರನ್ನು ಬಂಧಿಸಲಾಗಿದೆ, ಈ ಮೂಲಕ ಒಟ್ಟು ಐವರನ್ನು ಬಂಧಿಸಿದಂತಾಗಿದೆ ಎಂದು ಎಸ್ಪಿ ಬಿ.ಎಲ್.ಶ್ರೀಹರಿಬಾಬು ತಿಳಿಸಿದರು.
ಇಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮನಿ ಡಬ್ಲಿಂಗ್ ಹೆಸರಿನಲ್ಲಿ ಕೋಟಿ, ಕೋಟಿ ವಂಚನೆ ಆರೋಪದಡಿ ತಲೆಮರೆಸಿಕೊಂಡು ಓಡಾಡುತ್ತಿದ್ದ ಪ್ರಮುಖ ಆರೋಪಿ ಮುಮ್ತಾಜ್ ಬೇಗಂ ಸೇರಿ ಆರೋಪಿಗಳಾದ ಆರೀಫಾ ಬೇಗಂ, ಜಾವೇದ್ ಎಂಬುವವರನ್ನು ಗೋವಾದಲ್ಲಿ ಬಂಧಿಸಲಾಗಿದೆ.
ಕೇರಳ ಮೂಲದ ನಸ್ರೀನ್ ಹಾಗೂ ಜಬೀರ್ ಜೇನಗಶೇರಿ ಎಂಬುವವರನ್ನು ಕೇರಳದಲ್ಲೇ ಪೊಲೀಸರು ಬಂಧಿಸಿದ್ದಾರೆ ಎಂದರು.
ನಗರದ ಡಿವೈಎಸ್ಪಿ ಮಂಜುನಾಥ, ಹೊಸಪೇಟೆ ಪಟ್ಟಣ ಠಾಣೆ ಲಖನ್ ಮಸಗುಪ್ಪಿ, ಗ್ರಾಮೀಣ ಠಾಣೆ ಸಿಪಿಐ ಗುರುರಾಜ ಕಟ್ಟಿಮನಿ ನೇತೃತ್ವದಲ್ಲಿ ಮೂರು ತಂಡ ರಚನೆಯಾಗಿದೆ. ಒಟ್ಟು 8 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ, ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇನ್ನುಳಿದ ಮೂವರು ಆರೋಪಿಗಳಿಗೆ ಶೋಧ ನಡೆಸಲಾಗಿದೆ. ಹೆಚ್ಚಿನ ತನಿಖೆಗಾಗಿ ಕೋರ್ಟ್ ನಿಂದ ಅನುಮತಿ ಪಡೆದು ಆರೋಪಿಗಳನ್ನ ಕಸ್ಟಡಿಗೆ ತೆಗೆದುಕೊಂಡು ಪ್ರಕರಣ ತನಿಖೆ ನಡೆಸಲಾಗುವುದು ಎಂದರು.
