
ವೇಗವಾಗಿ ರಸ್ತೆ ದಾಟಲು ಪ್ರಯತ್ನಿಸಿದ ಚಿರತಗೆ ಹಾಲು ಮಾರುವವನ ಬೈಕ್ ಡಿಕ್ಕಿ ಹೊಡೆದಿರುವಂತಹ ಘಟನೆಯೊಂದು ರಾಜಸ್ಥಾನದ ಉದಯಪುರದಲ್ಲಿ ನಡೆದಿದ್ದು, ಇದರ ಮೈ ಝಲ್ ಎನಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಉದಯಪುರ ನಗರದ ಸಮೀಪ ವಸತಿ ಪ್ರದೇಶದಲ್ಲಿ ಚಿರತೆ ರಸ್ತೆ ದಾಟಲು ಪ್ರಯತ್ನಿಸುತ್ತಿದ್ದಾಗ ಹಾಲು ಮಾರಾಟಗಾರನ ಬೈಕ್‌ಗೆ ಡಿಕ್ಕಿ ಹೊಡೆದಿದೆ.
ಈ ಘರ್ಷಣೆ ವೇಳೆ ಹಾಲು ಮಾರಾಟಗಾರ ಹಾಗೂ ಚಿರತೆ ನೆಲಕ್ಕೆ ಬಿದ್ದು, ಇಬ್ಬರಿಗೂ ಗಾಯಗಳಾಗಿವೆ. ಬೈಕ್‌ನಲ್ಲಿ ಸಾಗಿಸಲಾಗುತ್ತಿದ್ದ ಹಾಲು ರಸ್ತೆಯಿಡೀ ಚೆಲ್ಲಿರುವುದು, ಹಾಲು ಮಾರಾಗಾರ ಗಾಯಗೊಂಡು ರಸ್ತೆಯಲ್ಲಿ ಬಿದ್ದಿರುವುದು ಹಾಗೂ ಗಾಯಗೊಂಡ ಚಿರತೆ ಭಯದಿಂದ ಎದ್ದು, ಬಿದ್ದು ಅಲ್ಲಿಂದ ಓಡಿ ಹೋಗುವುದು ವಿಡಿಯೋದಲ್ಲಿ ಕಾಣಿಸಿಕೊಂಡಿದೆ.
ತಕ್ಷಣ ಅಲ್ಲಿದ್ದ ಸ್ಥಳೀಯ ವ್ಯಕ್ತಿಗಳು ಓಡಿ ಬಂದು ಹಾಲು ಮಾರಾಟಗಾರನಿಗೆ ಸಹಾಯ ಮಡಿದ್ದಾರೆ. ಆತನನ್ನು ಎಬ್ಬಿಸಿ, ಸುರಕ್ಷಿತವಾಗಿ ಹಿಂದಿರುಗಿಸಿದ್ದಾರೆ.
ಉದಯಪುರದಲ್ಲಿ ಚಿರತೆಯ ಓಡಾಟ ಇದೇ ಮೊದಲಲ್ಲ. ಕಳೆದ ತಿಂಗಳು ನಗರದಲ್ಲಿ ಚಿರತೆ ದಾಳಿಗೆ 10 ಮಂದಿ ಬಲಿಯಾಗಿದ್ದರು. ಇದರ ಬೆನ್ನಲ್ಲೇ ಅಲ್ವಾರ್, ದೌಸಾ, ಜೈಪುರ ಮತ್ತು ಸಿಕರ್‌ನಲ್ಲಿ ಚಿರತೆಗಳ ಓಡಾಟ ವರದಿಯಾಗಿದೆ.
