![](https://vidyamaana.com/wp-content/uploads/2024/09/image_1.png.jpeg.webp)
ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಹುಸ್ಕೂರು ಕೆರೆಯಲ್ಲಿ ಯುವತಿ (girl) ಅನುಮಾನಸ್ಪದವಾಗಿ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ತಂದೆ, ಮಗಳು ಬೈಕ್ನಲ್ಲಿ ಸಾಗುತ್ತಿದ್ದ ವೇಳೆ ಕೆರೆಗೆ ಬೈಕ್ ಬಿದ್ದಿದೆ. ಈಜಿ ದಡ ಸೇರಿದ ತಂದೆ ರಾಮಮೂರ್ತಿ ಠಾಣೆಗೆ ಹಾಜರಾಗಿದ್ದಾರೆ.
ಆದರೆ ಮಗಳು ಸಹನಾ (21) ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾಳೆ. ಮಗಳನ್ನು ರಕ್ಷಣೆ ಮಾಡದೇ ನೇರವಾಗಿ ಠಾಣೆಗೆ ರಾಮಮೂರ್ತಿ ಬಂದಿದ್ದಾರೆ. ಸದ್ಯ ಮೃತ ಸಹನಾ ಪೋಷಕರ ವಿರುದ್ಧ ಪ್ರಿಯಕರ ನಿತಿನ್ ಮರ್ಯಾದಾ ಹತ್ಯೆ ಆರೋಪ ಮಾಡಿದ್ದಾರೆ.
ಕಳೆದ ಒಂದು ವರ್ಷದಿಂದ ನಿತಿನ್, ಸಹನಾ ಪರಸ್ಪರ ಪ್ರೀತಿಸುತ್ತಿದ್ದರು. 2 ದಿನದ ಹಿಂದೆ ಯುವತಿ ಪೋಷಕರಿಗೆ ಪ್ರೀತಿಯ ವಿಚಾರ ಗೊತ್ತಾಗಿದೆ. ಅಂದು ರಾತ್ರಿ ಪ್ರಿಯಕರ ನಿತಿನ್ಗೆ ಕರೆ ಮಾಡಿದ್ದ ಸಹನಾ ತಂದೆ, ಬೆಳಗ್ಗೆ ಮಾತುಕತೆಗೆ ಬರುವಂತೆ ತಿಳಿಸಿದ್ದಾರೆ. ಸಹನಾ ತಂದೆ ಸ್ನೇಹಿತನ ಮನೆಯಲ್ಲಿ ನ್ಯಾಯ ಪಂಚಾಯ್ತಿ ನಡೆದಿದೆ. ಈ ವೇಳೆ ಪುತ್ರಿ ಮೇಲೆ ರಾಮಮೂರ್ತಿ ಹಲ್ಲೆ ಮಾಡಿದ್ದಾರೆ. ಪ್ರಾಣ ಹೋದರೂ ಪ್ರೀತಿಗೆ ಒಪ್ಪುವುದಿಲ್ಲ ಎಂದಿದ್ದಾರೆ.
ಪ್ರಿಯಕರನ ತಾಯಿ ಕೇಳಿಕೊಂಡರೂ ರಾಮಮೂರ್ತಿ ಮದುವೆಗೆ ಒಪ್ಪಿಲ್ಲ. 2 ದಿನ ಸಮಯ ಕೇಳಿ ಮಗಳನ್ನು ರಾಮಮೂರ್ತಿ ಕರೆದೊಯ್ದಿದ್ದಾರೆ. ಮಾರ್ಗಮಧ್ಯೆ ಕೆರೆಗೆ ತಳ್ಳಿ ಸಹನಾಳನ್ನು ಕೊಲೆ ಮಾಡಿರುವುದಾಗಿ ಆರೋಪ ಮಾಡಲಾಗಿದೆ. ಮರಣೋತ್ತರ ವರದಿಗಾಗಿ ಹೆಬ್ಬಗೋಡಿ ಪೊಲೀಸರು ಕಾಯುತ್ತಿದ್ದಾರೆ. ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸದ್ಯ ಯುವತಿ ಸಾವಿನ ಸುತ್ತ ಅನುಮಾನದ ಹುತ್ತ ಹುಟ್ಟಿಕೊಂಡಿದೆ. ನಿತಿನ್ನನ್ನು ಮದುವೆ ಆಗುವುದಾಗಿ ಯುವತಿ ಹಠ ಹಿಡಿದಿದ್ದಳು. ಆದರೆ ಅಕ್ಕನ ಮಗನ ಜೊತೆ ವಿವಾಹಕ್ಕೆ ತಂದೆ ಮುಂದಾಗಿದ್ದರು. ಆದರೆ ಯುವತಿ ಅತ್ತೆ ಮಗನ ಜೊತೆ ಮದುವೆಗೆ ಒಪ್ಪಿರಲಿಲ್ಲ. ಇದೇ ವಿಚಾರಕ್ಕೆ ಅಪ್ಪ-ಮಗಳ ಜೊತೆ ಗಲಾಟೆ ನಡೆದಿತ್ತು.
![](https://vidyamaana.com/wp-content/uploads/2025/02/screenshot_20250213_061213_dailyhunt9195516925344969626-1024x525.jpg)