
ದೆಹಲಿ ರೈಲು ನಿಲ್ದಾಣದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ 18 ಮಂದಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 3 ಮಕ್ಕಳು, 10 ಮಂದಿ ಪುರುಷರು ಹಾಗು 3 ಮಹಿಳೆಯರು ಪ್ರಾಣ ಕಳೆದುಕೊಂಡಿದ್ದಾರೆ
ಶನಿವಾರ (ಫೆ.16) ರಾತ್ರಿ 9:55ರ ಸುಮಾರಿಗೆ ಈ ಘಟನೆ ನಡೆಸಿದ್ದು, ಕುಂಭಮೇಳಕ್ಕೆ ತೆರಳಲು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ದೆಹಲಿ ರೈಲ್ವೇ ನಿಲ್ದಾಣದಲ್ಲಿ ಜಮಾಯಿಸಿ ಏಕಾಏಕಿ ಪ್ಲಾಟ್‌ಫಾರ್ಮ್‌ಗಳಿಗೆ ನುಗ್ಗಿದಾಗ ಕಾಲ್ತುಳಿತ ಸಂಭವಿಸಿದೆ.
ರೈಲು ನಿಲ್ದಾಣಕ್ಕೆ ಬಂದ ಬಹುತೇಕ ಪ್ರಯಾಣಿಕರು ಕನ್‌ಫರ್ಮ್ ಆದ ಟಿಕೆಟ್ ಹೊಂದಿದ್ದರಾದರೂ ರೈಲು ಏರಿ ಸೀಟ್ ಪಡೆಯುವ ಆತುರದಲ್ಲಿ ಕಾಲ್ತುಳಿತ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ಲಾಟ್‌ಫಾರ್ಮ್ ಸಂಖ್ಯೆ 12, 13 ಮತ್ತು 14ರಲ್ಲಿ ಪ್ರಯಾಗ್ ರಾಜ್ ರೈಲುಗಳು ಹೊರಡುವುದಿತ್ತು. ಇದೇ ಪ್ಲಾಟ್‌ಫಾರ್ಮ್‌ನಲ್ಲಿ ಭುಬನೇಶ್ವರ್ ಎಕ್ಸ್‌ಪ್ರೆಸ್ ಹಾಗೂ ಸ್ವತಂತ್ರ ಸೇನಾನಿ ಎಕ್ಸ್‌ಪ್ರೆಸ್ ಬರುವಿಕೆ ವಿಳಂಬವಾದ್ದರಿಂದ ಅದಾಗಲೇ ಆ ರೈಲಿನ ಪ್ರಯಾಣಿಕರು ಪ್ಲಾಟ್‌ಫಾರ್ಮ್‌ನಲ್ಲಿ ಕಾಯುತ್ತಿದ್ದರು. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ ಜನ ರೈಲು ಏರಲು ನುಗ್ಗಿದಾಗ ಈ ದುರ್ಘಟನೆ ಸಂಭವಿಸಿದೆ.
ಏಕಾಏಕಿ ಕಾಲ್ತುಳಿತ ಸಂಭವಿಸಿ ರೈಲು ನಿಲ್ದಾಣದಲ್ಲಿ ಉಸಿರುಗಟ್ಟಿಸುವ ವಾತಾರವರಣ ಸೃಷ್ಟಿಯಾದ್ದರಿಂದ ಹಲವರು ಪ್ರಜ್ಞೆತಪ್ಪಿ ಸ್ಥಳದಲ್ಲೇ ಕುಸಿದುಬಿದ್ದಿದ್ದಾರೆ
ಇನ್ನು ಘಟನೆಯ ನಂತರ ಪ್ರಯಾಗ್‌ರಾಜ್‌ಗೆ ತೆರಳಬೇಕಿದ್ದ ಎರಡು ರೈಲುಗಳ ಪ್ರಯಾಣವನ್ನು ರದ್ದುಗೊಳಿಸಲಾಗಿತ್ತು. ಇದೀಗ ಹೆಚ್ಚುವರಿಯಾಗಿ ನಾಲ್ಕು ರೈಲುಗಳನ್ನು ಓಡಿಸಲು ರೈಲ್ವೇ ಇಲಾಖೆ ತೀರ್ಮಾನಿಸಿದೆ. ಇನ್ನು ಘಟನೆಯಲ್ಲಿ ಸಾವನ್ನಪ್ಪಿದವರಿಗೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ
