
ಜಿಮ್‌ನಲ್ಲಿ ಅಭ್ಯಾಸ ಮಾಡುತ್ತಿದ್ದ ವೇಳೆ ಬರೋಬ್ಬರಿ 270 ಕೆಜಿ ತೂಕದ ಬಾರ್ ಕತ್ತಿನ ಮೇಲೆ ಬಿದ್ದಿದ್ದರಿಂದ ಕುತ್ತಿಗೆ ಮುರಿದು ಚಿನ್ನದ ಪದಕ ವಿಜೇತ ಮಹಿಳಾ ಪವರ್‌ಲಿಫ್ಟರ್ ಮೃತಪಟ್ಟಿದ್ದಾರೆ. 17 ವರ್ಷದ ಯಾಷ್ಟಿಕಾ ಆಚಾರ್ಯ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದಾಗ ಘಟನೆ ನಡೆದಿತ್ತು.
ಕೂಡಲೇ ಆಕೆಗೆ ಪ್ರಥಮ ಚಿಕಿತ್ಸೆ ನೀಡಿದರೂ, ಆಕೆ ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
ಇಡೀ ಘಟನೆಯ ವೀಡಿಯೊ ವೈರಲ್ ಆಗಿದ್ದು, ವೀಡಿಯೊದಲ್ಲಿ ಕ್ರೀಡಾಪಟು ವೇಟ್‌ಲಿಫ್ಟಿಂಗ್ ಮಾಡುತ್ತಿರುವುದು ಕಾಣಬಹುದು. ಈ ವೇಳೆ ಆಕೆಯ ತರಬೇತುದಾರರೂ ಇದ್ದರು. ಅಷ್ಟರಲ್ಲಿ, ಭಾರ ಎತ್ತುವಾಗ, ಅವಳು ಇದ್ದಕ್ಕಿದ್ದಂತೆ ಕೆಳಗೆ ಬಿದ್ದಿದ್ದು ಸ್ಕ್ವಾಟ್ ಬಾರ್‌ಗಳು ಆಕೆಯ ಕುತ್ತಿಗೆಯ ಮೇಲೆ ಬಿದ್ದವು. ನಿನ್ನೆ ಸಂಜೆ 7 ಗಂಟೆ ಸುಮಾರಿಗೆ ನಯಾ ಶಹರ್ ಪೊಲೀಸ್ ಠಾಣೆ ಪ್ರದೇಶದಲ್ಲಿರುವ ಜಿಮ್‌ನಲ್ಲಿ ಈ ಅಪಘಾತ ಸಂಭವಿಸಿದೆ.ವರದಿಗಳ ಪ್ರಕಾರ, ಆಕೆ ತರಬೇತುದಾರರ ಉಪಸ್ಥಿತಿಯಲ್ಲಿ ಪ್ರತಿ ದಿನ ಅಭ್ಯಾಸ ಮಾಡುತ್ತಿದ್ದಳು. ಇದ್ದಕ್ಕಿದ್ದಂತೆ, ಆಕೆಯ ಕುತ್ತಿಗೆಯ ಮೇಲೆ ಒಂದು ಬಾರ್ ಬಿದ್ದಿತು. ಅಲ್ಲಿದ್ದ ಇತರ ಕ್ರೀಡಾಪಟುಗಳು ಆಕೆಯ ನೆರವಿಗೆ ಧಾವಿಸಿದರು. ಘಟನೆ ನಡೆದ ತಕ್ಷಣ ಯಷ್ಟಿಕಾ ಪ್ರಜ್ಞೆ ತಪ್ಪಿ ಬಿದ್ದಳು. ತರಬೇತುದಾರ ಅವರಿಗೆ ಸಿಪಿಆರ್ ಕೂಡ ನೀಡಿದರು. ಆದರೆ ಯಾವುದೇ ಚಲನೆ ಇರಲಿಲ್ಲ.
ಇತ್ತೀಚೆಗೆ ಗೋವಾದಲ್ಲಿ ನಡೆದ 33ನೇ ರಾಷ್ಟ್ರೀಯ ಬೆಂಚ್ ಪ್ರೆಸ್ ಚಾಂಪಿಯನ್‌ಶಿಪ್‌ನಲ್ಲಿ ಯಷ್ಟಿಕಾ ಚಿನ್ನ ಮತ್ತು ಕ್ಲಾಸಿಕ್ ವಿಭಾಗದಲ್ಲಿ ಬೆಳ್ಳಿ ಗೆದ್ದಿದ್ದರು.
