
ಪಕ್ಕದ ಮನೆಯವರ ಕೋಳಿ ಮುಂಜಾನೆ 3 ಗಂಟೆಗೆ ಕೂಗಿ ನಿದ್ರೆ ಹಾಳು ಮಾಡುತ್ತದೆ ಎಂದು ಕೇರಳದ ವ್ಯಕ್ತಿಯೊಬ್ಬರು ದೂರು ನೀಡಿರುವಂತಹ ವಿಚಿತ್ರ ಘಟನೆಯೊಂದು ನಡೆದಿದೆ.
ಕೇರಳದ ಪಥನಂತಿಟ್ಟಾ ಪ್ರದೇಶದ ಪ್ರಶಾಂತವಾದ ಪಲ್ಲಿಕಲ್ ಗ್ರಾಮದಲ್ಲಿ ಈ ಘಟನೆ ವರದಿಯಾಗಿದೆ.
ರಾಧಾಕೃಷ್ಣ ಕುರುಪ್ ಎಂಬ ವೃದ್ಧರೊಬ್ಬರು ಪ್ರತಿದಿನ ಮುಂಜಾನೆ 3 ಗಂಟೆಗೆ ಪಕ್ಕದ ಮನೆಯವರ ಕೋಳಿ ಕೂಗಿ ನಿದ್ರೆಗೆ ಭಂಗ ತರುತ್ತಿದೆ. ಅದು ನಮ್ಮ ಶಾಂತಿಯುತ ಜೀವನವನ್ನು ಅಡ್ಡಿಪಡಿಸುತ್ತಿದೆ ಎಂದು ಆರೋಪಿಸಿ ಅಡೂರು ಕಂದಾಯ ವಿಭಾಗೀಯ ಕಚೇರಿಯಲ್ಲಿ (ಆರ್‌ಡಿಒ) ನೆರೆಮನೆಯ ಅನಿಲ್‌ಕುಮಾರ್ ಅವರ ಕೋಳಿಯ ವಿರುದ್ಧ ದೂರು ದಾಖಲಿಸಿದ್ದಾರೆ.
ಈ ದೂರನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದಾರೆ. ಆರ್‌ಡಿಒ ಈ ಬಗ್ಗೆ ತನಿಖೆ ಆರಂಭಿಸಿ ಸಮಸ್ಯೆಗೆ ಹುಂಜವೇ ಕಾರಣ ಎಂದು ಪರಿಗಣಿಸಿದ್ದಾರೆ. ಈ ಕುರಿತು ಚರ್ಚಿಸಲು ಕುರುಪ್ ಮತ್ತು ಕುಮಾರ್ ಇಬ್ಬರನ್ನೂ ಕರೆಸಿದ್ದು, ನಂತರ ಅಧಿಕಾರಿಗಳು ಸ್ಥಳವನ್ನು ಪರಿಶೀಲಿಸಿದ್ದಾರೆ. ಈ ವೇಳೆ ಕುಮಾರ್ ತಾವು ಸಾಕಿದ ಹುಂಜವನ್ನು ತಮ್ಮ ಮನೆಯ ಮೇಲಿನ ಮಹಡಿಯಲ್ಲಿ ಇರಿಸಿರುವುದು ಕಂಡುಬಂದಿದೆ.
ಪರಿಶೀಲನೆಯ ಬಳಿಕ ಕುರುಪ್ ನಿಜವಾಗಿಯೂ ಕೋಳಿಯ ಕೂಗಾಟಕ್ಕೆ ಬೇಸತ್ತಿದ್ದಾರೆ ಎಂದು ತಿಳಿದು ಬಂದಿದೆ. ಈ ವಿವಾದವನ್ನು ಇತ್ಯರ್ಥಪಡಿಸಲು ಕೋಳಿಯ ಶೆಡ್ ಅನ್ನು ಮೇಲಿನ ಮಹಡಿಯಿಂದ ಜಮೀನಿನ ದಕ್ಷಿಣ ಭಾಗಕ್ಕೆ ಸ್ಥಳಾಂತರಿಸಲು ಕುಮಾರ್‌ಗೆ ಆರ್‌ಡಿಒ ಸೂಚನೆ ನೀಡಿದೆ.
ಅಧಿಕಾರಿಗಳು ಸ್ಥಳಾಂತರಕ್ಕೆ 14 ದಿನಗಳ ಗಡುವನ್ನು ನೀಡಿದ್ದಾರೆ.
