
ರಾ.ಹೆ.75ರ ಮಾಣಿ ಸಮೀಪದ ಸತ್ತಿಕಲ್ಲಿನಲ್ಲಿ ತಂಪು ಪಾನೀಯ ಸಾಗಾಟದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಬಿದ್ದ ಪರಿಣಾಮ ಬೆಂಕಿ ಕಾಣಿಸಿಕೊಂಡು ಲಾರಿಯ ಚಕ್ರಗಳು ಸೇರಿದಂತೆ ಒಂದಷ್ಟು ಭಾಗ ಹೊತ್ತಿ ಉರಿದ ಘಟನೆ ರವಿವಾರ ನಡೆದಿದೆ.
ಘಟನೆಯಲ್ಲಿ ಲಾರಿ ಚಾಲಕ ಮೊಹಮ್ಮದ್ ಇರ್ಫಾನ್(37) ಗಾಯಗೊಂಡಿದ್ದು, ಪುತ್ತೂರು ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ.
ಗೂಡಿನಬಳಿಯ ಅಥಾವುಲ್ಲ ಅವರಿಗೆ ಸೇರಿದ ಸಂಸ್ಥೆಯಿಂದ ತಂಪು ಪಾನೀಯಗಳನ್ನು ಲಾರಿಯ ಮೂಲಕ ಸಾಗಾಟ ಮಾಡಲಾಗುತ್ತಿದ್ದು, ಸತ್ತಿಕಲ್ಲಿನಲ್ಲಿ ಲಾರಿ ಪಲ್ಟಿಯಾಗಿದೆ. ಪಲ್ಟಿಯಾಗುವ ವೇಳೆ ಸ್ಪಾರ್ಕ್ ಆಗಿ ಬೆಂಕಿ ಕಾಣಿಸಿಕೊಂಡು ಟಯರ್‌ಗಳಿಗೆ ಹಿಡಿದಿದ್ದು, ಜತೆಗೆ ಇತರ ಭಾಗಗಳು ಕೂಡ ಹೊತ್ತಿ ಉರಿದಿದೆ. ಬೆಂಕಿಯು ತಂಪು ಪಾನೀಯಗಳ ಬಾಟಲ್‌ಗಳಿಗೂ ಹಿಡಿದು ಸಾಕಷ್ಟು ಬಾಟಲ್‌ಗಳು ಹೊತ್ತಿದೆ.
ಘಟನಾ ಸ್ಥಳಕ್ಕೆ ಬಂಟ್ವಾಳ ಅಗ್ನಿಶಾಮಕ ದಳದವರು ತೆರಳಿ ಬೆಂಕಿ ನಂದಿಸುವ ಕಾರ್ಯ ನಿರ್ವಹಿಸಿದ್ದಾರೆ.
ಲಾರಿಯಲ್ಲಿ ದೊಡ್ಡ ಪ್ರಮಾಣದಲ್ಲಿ ತಂಪು ಪಾನೀಯ ತುಂಬಿದ ಬಾಟಲ್‌ಗಳಿದ್ದು, ಲಾರಿ ಬಿದ್ದ ರಭಸಕ್ಕೆ ಸಂಪೂರ್ಣವಾಗಿ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.
