ಯುವಕನೊಬ್ಬನಿಂದ ನಡೆದ ಸಾಮೂಹಿಕ ಹತ್ಯೆ ಪ್ರಕರಣ ಇಡೀ ಕೇರಳವನ್ನೇ ಬೆಚ್ಚಿ ಬೀಳಿಸಿದೆ. ಪ್ರೇಯಸಿಯೂ ಸೇರಿದಂತೆ ತನಗೆ ಸಂಬಂಧಪಟ್ಟ ಐವರನ್ನು ಬರ್ಬರವಾಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಕೇರಳದ ವೆಂಜರಮೂಡಿನಲ್ಲಿ ನಡೆದಿದೆ.

ಆರಂಭದಲ್ಲಿ ಈ ಕೊಲೆಗೆ ಕಾರಣ ಏನೆಂಬುದೇ ಪೊಲೀಸರಿಗೆ ದೊಡ್ಡ ತಲೆನೋವಾಗಿತ್ತು.ಕೊಲೆ ಮಾಡಿದ ಯುವಕ ತಾನಾಗಿಯೇ ಪೊಲೀಸರಿಗೆ ಶರಣಾದನು. ಈ ವೇಳೆ ಕೊಲೆ ಮಾಡಿದ್ದೇಕೆ ಎಂದು ಪ್ರಶ್ನೆ ಮಾಡಿದಾಗ, ನನಗೆ ಗೊತ್ತಿಲ್ಲ ಎಂದು ಹೇಳಿದ್ದನು. ಹೀಗಾಗಿ ಈ ಪ್ರಕರಣ ಪೊಲೀಸರನ್ನು ಗೊಂದಲಕ್ಕೆ ದೂಡಿತ್ತು. ಆದರೆ, ಪೊಲೀಸರು ಕೊನೆಗೂ ಕಾರಣವನ್ನು ಪತ್ತೆಹಚ್ಚಿದ್ದಾರೆ. ಉದ್ಯಮದಲ್ಲಿ ತೀವ್ರ ಕುಸಿತದ ನಂತರ ಉಂಟಾದ ಹಣಕಾಸಿನ ಸಮಸ್ಯೆಯಿಂದಾಗಿ ಈ ರೀತಿ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ.

ಆರೋಪಿ ಯುವಕನ ಹೆಸರನ್ನು ಅಫಾನ್ (23) ಎಂದು ಗುರುತಿಸಲಾಗಿದೆ. ಕೊಲೆ ಮಾಡಿದ ಬಳಿಕ ಅಫಾನ್, ನೇರವಾಗಿ ವೆಂಜರಮೂಡು ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ತಿರುವನಂತಪುರದ ಪಂಗೋಡ್, ಆರ್.ಎನ್. ಪುರಂ ಮತ್ತು ಪೆರುಮಾಳದ ಮೂರು ಮನೆಯಲ್ಲಿ ಐದು ಮಂದಿಯನ್ನು ಕೊಲೆ ಮಾಡಿದ್ದಾನೆ. ಅಲ್ಲದೆ, ಹಲ್ಲೆಯಿಂದ ಆರೋಪಿಯ ತಾಯಿ ಶಮೀನಾ ಸ್ಥಿತಿ ಗಂಭೀರವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕೊಲೆ ಮಾಡಿದ ಬಳಿಕ ಪೊಲೀಸ್ ಠಾಣೆಗೆ ತೆರಳಿದ ಅಫಾನ್, ತಾನು ವಿಷ ಸೇವನೆ ಮಾಡಿರುವುದಾಗಿ ಹೇಳಿದ್ದ. ತಕ್ಷಣ ಆತನನ್ನು ತಿರುವನಂತಪುರದ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.

ತನ್ನ ಅಜ್ಜಿ ಸಲ್ಮಾ ಬೀವಿ (88), ಪಾಂಗೋಡ್ ಮನೆಯಲ್ಲಿರುವಾಗ ಅಫಾನ್ ಕೊಲೆ ಮಾಡಿದ್ದಾನೆ. ಬಳಿಕ ಎಸ್.ಎನ್ ಪುರಂನಲ್ಲಿದ್ದ ತನ್ನ ತಂದೆಯ ಸಹೋದರ ಲತೀಫ್ (69), ಆತನ ಪತ್ನಿ ಶಾಹೀದಾ (59) ಅವರನ್ನು ಕೊಂದಿದ್ದಾನೆ. ಇದಾದ ನಂತರ ಪೆರುಮಾಳದಲ್ಲಿ ತನ್ನ ಸಹೋದರ ಅಫ್ಸಾನ್ (13) ಮತ್ತು ತನ್ನ ಗರ್ಲ್ಫ್ರೆಂಡ್ ಫರ್ಸಾನಾಳನ್ನು ಅಫಾನ್ ಭೀಕರವಾಗಿ ಹತ್ಯೆ ಮಾಡಿದ್ದಾನೆ. ತಾಯಿ ಶಮೀನಾ ಮೇಲೆಯೂ ಹಲ್ಲೆ ಮಾಡಿದ್ದು, ಗಂಭೀರ ಸ್ಥಿತಿಯಲ್ಲಿರುವ ಆಕೆಗೆ ತಿರುವನಂತಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಆರೋಪಿ ಅಫಾನ್, ತನ್ನ ತಂದೆಯೊಂದಿಗೆ ವಿಸಿಟಿಂಗ್ ವೀಸಾದಲ್ಲಿ ವಿದೇಶದಲ್ಲಿದ್ದನು. ಇತ್ತೀಚೆಗಷ್ಟೇ ಕೇರಳಕ್ಕೆ ಆಗಮಿಸಿದ್ದನು. ಆತನ ತಾಯಿ ಶಮೀನಾ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದರು. ಮೃತ ಕಿರಿಯ ಸಹೋದರ ಅಫ್ಸಾನ್ ವೆಂಜರಮೂಡು ಶಾಲೆಯಲ್ಲಿ ಒಂಬತ್ತನೇ ತರಗತಿ ವಿದ್ಯಾರ್ಥಿಮೃತ ಲತೀಫ್ ನಿವೃತ್ತ ಸಿಆರ್‌ಪಿಎಫ್ ಅಧಿಕಾರಿಯಾಗಿದ್ದರು. .

ಕೊಲೆಗೆ ಕಾರಣವೇನು?

ಅಪರಾಧ ಎಸಗುವಾಗ ಅಫಾನ್ ಡ್ರಗ್ಸ್ ಪ್ರಭಾವಕ್ಕೆ ಒಳಗಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಪರೀಕ್ಷೆಗಾಗಿ ಆತನ ರಕ್ತದ ಮಾದರಿಗಳನ್ನು ಸಂಗ್ರಹಿಸಲಾಗಿದೆ. ತನಿಖಾ ತಂಡವು ಇಂದು ಆತನನ್ನು ವಿಚಾರಣೆ ನಡೆಸುವ ಸಾಧ್ಯತೆಯಿದೆ. ಇನ್ನು ಪೊಲೀಸ್ ವಿಚಾರಣೆಯಲ್ಲಿ ಆಘಾತಕಾರಿ ಮಾಹಿತಿಗಳು ಹೊರಬಿದ್ದಿವೆ. ಅಫಾನ್ ಸಾಕಷ್ಟು ಜನರಿಂದ ಹಣವನ್ನು ಸಾಲ ಪಡೆದಿದ್ದ. ಆರ್ಥಿಕ ತೊಂದರೆಗಳು ಅವರ ಕುಟುಂಬವನ್ನು ತೀವ್ರ ಕಾಡುತ್ತಿತ್ತು ಎಂದು ನೆರೆಹೊರೆಯವರು ಮತ್ತು ಆತನ ಪರಿಚಯಸ್ಥರು ಪೊಲೀಸರಿಗೆ ತಿಳಿಸಿದ್ದಾರೆ.

ಇತ್ತೀಚೆಗೆ, ಹಣಕಾಸಿನ ಸಮಸ್ಯೆ ತೀವ್ರಗೊಂಡಿತ್ತು. ಸಾಲಗಳನ್ನು ತೀರಿಸಲು ಅಫಾನ್ ತನ್ನ ಸಂಬಂಧಿಕರಿಂದ ಹಣವನ್ನು ಸಹ ಕೇಳಿದ್ದನು. ಆದರೆ, ಹಣ ಕೊಡಲು ಸಂಬಂಧಿಕರು ನಿರಾಕರಿಸಿದ್ದರು. ಇದರಿಂದ ತೀವ್ರ ಅಸಮಾಧಾನಗೊಂಡಿದ್ದ ಅಫಾನ್, ಕೊನೆಗೆ ಕೊಲೆ ಮಾಡಿದ್ದಾನೆಂದು ತಿಳಿದುಬಂದಿದೆ. ಕೊಲೆ ನಡೆಯುವ ಎರಡು ದಿನಗಳ ಮೊದಲು, ಅಫಾನ್ ತನ್ನ ಗೆಳತಿ ಫರ್ಸಾನಾಳನ್ನು ಮನೆಗೆ ಕರೆತಂದಿದ್ದ. ಈ ವೇಳೆ ಆತನ ಕುಟುಂಬಸ್ಥರು ಆಕ್ಷೇಪವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಫರ್ಸಾನಾ ಅಂಚಲ್‌ನ ಕಾಲೇಜಿನಲ್ಲಿ ಬಿಎಸ್ಸಿ ರಸಾಯನಶಾಸ್ತ್ರ ವಿದ್ಯಾರ್ಥಿನಿಯಾಗಿದ್ದಳು.

ಪ್ರಸ್ತುತ ಕೊಲೆಗೆ ಹಣಕಾಸಿನ ಸಮಸ್ಯೆಗಳಿರಬಹುದು ಎಂದು ನಾವು ಶಂಕಿಸುತ್ತೇವೆ. ಇತರ ಎಲ್ಲಾ ಆಯಾಮಗಳಿಂದಲೂ ತನಿಖೆ ಮಾಡಬೇಕಾಗಿದೆ ಎಂದು ಅಟ್ಟಿಂಗಲ್ ಡಿವೈಎಸ್ಪಿ ಮಂಜುಲಾಲ್ ಹೇಳಿದ್ದಾರೆ

Leave a Reply

Your email address will not be published. Required fields are marked *

Join WhatsApp Group
error: Content is protected !!