ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಆಡಳಿತವು ಹೊಸ ಪ್ರಯಾಣ ನಿಷೇಧವನ್ನು ರೂಪಿಸುತ್ತಿದೆ. ಇದು ಜಾರಿಗೆ ಬಂದರೆ ಪಾಕಿಸ್ತಾನ, ಭೂತಾನ್‌, ರಷ್ಯಾ ಸೇರಿ ಹಲವು ದೇಶಗಳ ನಾಗರಿಕರ ಮೇಲೆ ಪರಿಣಾಮ ಬೀರಲಿದೆ ಎಂದು ‘ನ್ಯೂಯಾರ್ಕ್‌ ಟೈಮ್ಸ್‌’ ಶುಕ್ರವಾರ ವರದಿ ಮಾಡಿದೆ

ಪ್ರಯಾಣ ನಿರ್ಬಂಧದ ಕರಡು ಪಟ್ಟಿಯಲ್ಲಿ 43 ದೇಶಗಳನ್ನು ಸೇರಿಸಿದ್ದು, ರೆಡ್‌, ಆರೆಂಜ್‌ ಮತ್ತು ಯೆಲ್ಲೊ ಎಂಬ ಮೂರು ವರ್ಗಗಳಾಗಿ ವಿಂಗಡಿಸಲಾಗಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಚಿಸದ ಅಧಿಕಾರಿಗಳು ನೀಡಿರುವ ಮಾಹಿತಿ ಉಲ್ಲೇಖಿಸಿ ಅದು ವರದಿ ಮಾಡಿದೆ.

ರೆಡ್‌ ಕೆಟಗರಿ: ಅಮೆರಿಕ ಪ್ರವೇಶವನ್ನು ಸಂಪೂರ್ಣ ನಿಷೇಧಿಸಲಾದ ರೆಡ್‌ ಕೆಟಗರಿ ಪಟ್ಟಿಯಲ್ಲಿ ಅಫ್ಗಾನಿಸ್ತಾನ, ಭೂತಾನ್‌, ಇರಾನ್‌, ಲಿಬಿಯಾ, ಉತ್ತರ ಕೊರಿಯಾ, ಸೊಮಾಲಿಯ, ಸುಡಾನ್‌, ಸಿರಿಯಾ, ವೆನೆಜುವೆಲಾ ಮತ್ತು ಯೆಮೆನ್‌ ಇವೆ.

ಆರೆಂಜ್‌ ಕೆಟಗರಿ: ನಾಗರಿಕರ ವೀಸಾಗಳಿಗೆ ತೀವ್ರತರದಲ್ಲಿ ನಿರ್ಬಂಧ ಹೇರಲಾಗುವ ಆರೆಂಜ್‌ ಕೆಟಗರಿಯಲ್ಲಿ ಬೆಲರೂಸ್‌, ಎರಿಟ್ರಿಯಾ, ಹೈಟಿ, ಲಾವೋಸ್‌, ಮ್ಯಾನ್ಮಾರ್‌, ಪಾಕಿಸ್ತಾನ, ರಷ್ಯಾ, ಸಿಯೆರಾ ಲಿಯೋನ್‌, ದಕ್ಷಿಣ ಸುಡಾನ್‌ ಮತ್ತು ತುರ್ಕಮೆನಿಸ್ತಾನ್‌ ಇವೆ.

ಈ ವರ್ಗದಲ್ಲಿರುವ ರಾಷ್ಟ್ರಗಳ ಸಿರಿವಂತ ಉದ್ಯಮಿಗಳಿಗೆ ಅಮೆರಿಕಕ್ಕೆ ಭೇಟಿ ನೀಡಲು ಕೆಲವು ಸಂದರ್ಭಗಳಲ್ಲಿ ಅವಕಾಶ ನೀಡಬಹುದು. ಆದರೆ, ವಲಸಿಗ ಅಥವಾ ಪ್ರವಾಸಿ ವೀಸಾದಡಿ ಪ್ರಯಾಣಿಸಲು ನಾಗರಿಕರಿಗೆ ಅವಕಾಶ ಇಲ್ಲ.

ಯೆಲ್ಲೊ ಕೆಟಗರಿಯಲ್ಲಿ 22 ದೇಶಗಳನ್ನು ಪಟ್ಟಿ ಮಾಡಲಾಗಿದೆ. ಆ ದೇಶಗಳಿಗೆ ಸಂಬಂಧಿಸಿದಂತೆ ಅಮೆರಿಕವು ಹೊಂದಿರುವ ಕಳವಳವನ್ನು ಪರಿಹರಿಸಲು 60 ದಿನಗಳ ಕಾಲಾವಕಾಶ ನೀಡಲಾಗಿದೆ. ಅದರಲ್ಲಿ ವಿಫಲವಾಗುವ ದೇಶವನ್ನು ಆರೆಂಜ್‌ ಅಥವಾ ರೆಡ್‌ ಕೆಟಗರಿಗೆ ಸೇರಿಸಲಾಗುತ್ತದೆ.

‘ಈ ಪಟ್ಟಿಯನ್ನು ಹಲವು ವಾರಗಳ ಹಿಂದೆಯೇ ವಿದೇಶಾಂಗ ಇಲಾಖೆಯು ಸಿದ್ಧಪಡಿಸಿದೆ. ಇದು ಶ್ವೇತಭವನ ತಲುಪುವ ಹೊತ್ತಿಗೆ ಬದಲಾವಣೆಗಳು ಆಗಲೂಬಹುದು’ ಎಂದು ವರದಿ ತಿಳಿಸಿದೆ.





Leave a Reply

Your email address will not be published. Required fields are marked *

Join WhatsApp Group
error: Content is protected !!