ಮದುವೆಯಾಗುವುದಾಗಿ ನಂಬಿಸಿ ಯುವತಿಯೊಬ್ಬರ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದ, ಜಾಮೀನು ವೇಳೆ ಹೊರ ಬಂದಿದ್ದ ಕೇರಳದ ಪ್ರಸಿದ್ಧ ವ್ಲಾಗರ್‌, ಕಂಟೆಂಟ್‌ ಕ್ರಿಯೇಟರ್‌, ರೀಲ್ಸ್‌ ಮೂಲಕವೇ ಜನಪ್ರಿಯನಾಗಿದ್ದ 32 ವರ್ಷದ ಜುನೈದ್‌ (Junaid) ಮಲಪ್ಪುರಂನಲ್ಲಿ ಶುಕ್ರವಾರ (ಮಾ.

14) ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ಈತ ಸಂಚರಿಸುತ್ತಿದ್ದ ಬೈಕ್‌ ನಿಯಂತ್ರಣ ತಪ್ಪಿ ರಸ್ತೆ ಬಳಿ ಉರುಳಿ ಬಿದ್ದು ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ (Road Accident). ಮಲಪ್ಪುರಂನ ಕಾರಕುನ್ನು ಮರಥನಿಯಲ್ಲಿ ಈ ಅವಘಡ ನಡೆದಿದೆ.

ರೀಲ್ಸ್‌ ಮೂಲಕವೇ ಸೋಶಿಯಲ್‌ ಮೀಡಿಯಾದಲ್ಲಿ ಹವಾ ಎಬ್ಬಿಸಿದ್ದ ಜುನೈದ್‌ ತನ್ನ ಸ್ಲೋ ಮೋಷನ್‌ ಮತ್ತು ರೋಬೋಟಿಕ್‌ ಸ್ಟೈಲ್‌ ಡ್ಯಾನ್ಸ್‌, ವಿಡಿಯೊ ಮೂಲಕ ಜನಪ್ರಿಯತೆ ಪಡೆದುಕೊಂಡಿದ್ದ. ತಲೆಗೆ ಗಂಭೀರವಾಗಿ ಗಾಯಗೊಂಡು ರಸ್ತೆ ಬದಿ ಬಿದ್ದಿದ್ದ ಆತನನ್ನು ಆಸ್ಪತ್ರೆಗೆ ಸಾಗಿಸಿದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

ಜುನೈದ್‌ ಸಂಚರಿಸುತ್ತಿದ್ದ ಬೈಕ್‌ ಶುಕ್ರವಾರ ಸಂಜೆ ಸುಮಾರು 6:30ರ ವೇಳೆಗೆ ನಿಯಂತ್ರಣ ಕಳೆದುಕೊಂಡು ನೆಲಕ್ಕೆ ಉರುಳಿತ್ತು. ರಸ್ತೆಯಲ್ಲೇ ರಕ್ತ ಹರಿದು, ತಲೆಗೆ ಗಂಭೀರವಾಗಿ ಗಾಯಗೊಂಡು ಬಿದ್ದಿದ್ದ ಜುನೈದ್‌ನನ್ನು ಮೊದಲಿಗೆ ಬಸ್‌ ಕಾರ್ಮಿಕರು ಗುರುತಿಸಿದ್ದರು. ಕೂಡಲೇ ಕಾರೊಂದರಲ್ಲಿ ಆತನನ್ನು ಮಂಜೇರಿ ಮೆಡಿಕಲ್‌ ಕಾಲೇಜಿಗೆ ಕರೆದೊಯ್ಯಲಾಯಿತು. ಆದರೆ ಅಷ್ಟೊತ್ತಿಗಾಗಲೇ ಮೃತಪಟ್ಟಿದ್ದ ಎಂದು ವೈದ್ಯರು ತಿಳಿಸಿದ್ದಾರೆ.

ಲೈಂಗಿಕ ಕಿರುಕುಳ ಆರೋಪ

ಈ ಹಿಂದೆ ಜುನೈದ್‌ ವಿರುದ್ಧ ಯುವತಿಯೋರ್ವರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿತ್ತು. ಮಲಪ್ಪುರಂ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾದ ಈ ಹಿನ್ನೆಲೆಯಲ್ಲಿ ಮಾ. 1ರಂದು ಕೇರಳ ಪೊಲೀಸರು ಈತನನ್ನು ಬೆಂಗಳೂರಿನಿಂದ ವಶಕ್ಕೆ ಪಡೆದಿದ್ದರು. ಮದುವೆಯಾಗುವುದಾಗಿ ಭರವಸೆ ನೀಡಿ ತನ್ನ ಮೇಲೆ ಲೈಂಗಿಕ ಕಿರಿಕುಳ ನೀಡಿದ್ದಾಗಿ ಯುವತಿಯೋರ್ವರು ನೀಡಿದ ದೂರಿನ ಮೇಲೆ ಆತನನ್ನು ವಶಕ್ಕೆ ಪಡೆಯಲಾಗಿತ್ತು ಎಂದು ಆನ್‌ಮನೋರಮಾ ವರದಿ ಮಾಡಿತ್ತು.

ಆತನನ್ನು ಬಂಧಿಸಿ ಬಳಿಕ ಕೇರಳಕ್ಕೆ ಕರೆತರಲಾಗಿತ್ತು. ಈ ಸಂಬಂಧ ವಿಚಾರಣೆ ನಡೆಯುತ್ತಿದ್ದು, ಇತ್ತೀಚೆಗಷ್ಟೇ ಆತನಿಗೆ ಜಾಮೀನು ಲಭಿಸಿತ್ತು. ತನ್ನ ವಿಶಿಷ್ಟ ರೀಲ್ಸ್‌ ಮೂಲಕ ಇನ್‌ಸ್ಟಾಗ್ರಾಮ್‌ನಲ್ಲಿ ಮಲೆಯಾಳಿಗಳ ಗಮನ ಸೆಳೆದಿದ್ದ ಜುನೈದ್‌ ಕೆಲವು ದಿನಗಳಿಂದ ಸೋಶಿಯಲ್‌ ಮೀಡಿಯಾದಲ್ಲಿ ಅಷ್ಟಾಗಿ ಸಕ್ರಿಯನಾಗಿರಲಿಲ್ಲ. ಸದ್ಯ ಈ ಅಪಘಾತದ ವಿಚಾರಣೆ ನಡೆಯುತ್ತಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!