
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ತನ್ನ ವಿಶೇಷಚೇತನ ಮಗಳಿನಿಂದ ಬೇಸತ್ತ ತಾಯಿ, ಊಟದಲ್ಲಿ ವಿಷವನ್ನು ಬೆರೆಸಿ ಹೆತ್ತ ಮಗುವನ್ನೇ ಕೊಂದ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.
17 ವರ್ಷದ ಯಶಸ್ವಿ ಪವಾರ್ ಸಾವನ್ನಪ್ಪಿದ ದುರ್ದೈವಿ. 39 ವರ್ಷದ ತಾಯಿ ಸ್ನೇಹಲ್ ಪವಾರ್, ಮಗಳನ್ನು ಸಾಯಿಸಿದ ಬಳಿಕ, ಮಗಳ ಮೃತದೇಹವನ್ನು ಸ್ನೇಹಿತನೊಬ್ಬನ ಸಹಾಯದಿಂದ ವಿಲೇವಾರಿ ಮಾಡಿದ್ದಾಳೆ.
ಈ ಬಗ್ಗೆ ನೌಪಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಟ್ಟಿನಿಂದಲೇ ಅಂಗವೈಕಲ್ಯದಿಂದ ಬಳಲುತ್ತಿದ್ದ ಯಶಸ್ವಿ ಪವಾರ್‌ಗೆ ಮಾತನಾಡಲು ಹಾಗೂ ನಡೆದಾಡಲು ಸಾಧ್ಯವಾಗುತ್ತಿರಲಿಲ್ಲ. ಎಷ್ಟೇ ಚಿಕಿತ್ಸೆ ನೀಡಿದರೂ ಇದಕ್ಕೆ ಪರಿಹಾರ ಸಿಗಲಿಲ್ಲ. ಕಳೆದ ಒಂದೆರಡು ವರ್ಷಗಳಿಂದ ಆಕೆಯ ಆರೋಗ್ಯ ಮತ್ತಷ್ಟು ಹದಗೆಟ್ಟಿತ್ತು. ಈಕೆಯ ತಂದೆಯೂ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರು. ಗಂಡ ಹಾಗೂ ಮಗಳು, ಇಬ್ಬರ ಆರೈಕೆಯಿಂದಲೂ ಬೇಸತ್ತು ಹೋದ ಮಹಿಳೆ, ಮಗಳ ಜೀವ ತೆಗೆಯುವ ನಿರ್ಧಾರ ಮಾಡಿದಳು ಎಂದು ಪೋಲೀಸರು ತಿಳಿಸಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೋಲೀಸರು, ತಾಯಿ ಸ್ನೇಹಲ್ ಪವಾರ್, ಅಜ್ಜಿ ಸುರೇಖಾ ಮಹಂಗಡೆ ಹಾಗೂ ಸ್ನೇಹಲ್‌ನ ಸ್ನೇಹಿತನ ವಿರುದ್ಧ ಥಾಣೆಯ ನೌಪಾದ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದಾರೆ. ಅಜ್ಜಿಯನ್ನು ಈಗಾಗಲೇ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದ್ದು, ತಲೆಮರೆಸಿಕೊಂಡಿರುವ ಸ್ನೇಹಲ್ ಮತ್ತು ಆಕೆಯ ಸ್ನೇಹಿತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ಯಶಸ್ವಿ ಪವಾರ್ ಕಾಣೆಯಾಗಿರುವ ಬಗ್ಗೆ ಆಕೆಯ ಚಿಕ್ಕಮ್ಮ ಪೊಲೀಸರಿಗೆ ದೂರು ನೀಡಿದ ಬಳಿಕ, ತನಿಖೆ ನಡೆಸಿದ ಪೋಲೀಸರಿಗೆ ಸಿಸಿಟಿವಿ ದೃಶ್ಯಾವಳಿಗಳು ಕುರುಹು ನೀಡಿದವು. ಬಳಿಕ ನಡೆಸಿದ ತನಿಖೆಯ ಮೂಲಕ ಈ ಘಟನೆ ಬೆಳಕಿಗೆ ಬಂದಿದೆ.
