
ಇಲ್ಲಿನ ಫರಂಗಿಪೇಟೆ ಸಮೀಪದ ಕಿದೆಬೆಟ್ಟು ನಿವಾಸಿ ಪದ್ಮನಾಭ ಎಂಬುವರ ಪುತ್ರ, ದ್ವಿತೀಯ ಪಿಯು ವಿದ್ಯಾರ್ಥಿ ದಿಗಂತ್ ನಾಪತ್ತೆಯಾಗಿ 5 ದಿನ ಕಳೆದರೂ ಸುಳಿವು ಸಿಕ್ಕಿಲ್ಲ. ಆತನನ್ನು ಪತ್ತೆ ಮಾಡಲು ಪೊಲೀಸ್ ಇಲಾಖೆ ವಿಫಲವಾಗಿದೆ’ ಎಂದು ಆರೋಪಿಸಿ ಗ್ರಾಮಸ್ಥರು, ಬಿಜೆಪಿ ಮತ್ತು ವಿವಿಧ ಹಿಂದೂ ಪರ ಸಂಘಟನೆಗಳ ವತಿಯಿಂದ ಫರಂಗಿಪೇಟೆ ಜಂಕ್ಷನ್‌ನಲ್ಲಿ ಶನಿವಾರ ಪ್ರತಿಭಟನೆ ನಡೆಯಿತು.
ಪೊಲೀಸರು ಕೂಡಲೇ ಬಾಲಕನ ಪತ್ತೆ ಮಾಡಬೇಕು ಎಂದು ಆಗ್ರಹಿಸಿದ ಪ್ರತಿಭಟನಾಕಾರರು, ಕೆಲ ಹೊತ್ತು ಪೇಟೆಯ ಅಂಗಡಿ, ಮುಂಗಟ್ಟೆ ಬಂದ್ ಮಾಡಿದರು.
ಇದೇ ವೇಳೆ ಎಸ್ಪಿ ಯತೀಶ್ ಎನ್.ಭೇಟಿ ನೀಡಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು.
‘ನಾವು ಪ್ರತ್ಯೇಕ ತಂಡಗಳನ್ನು ರಚಿಸಿ ತನಿಖೆ ನಡೆಸುತ್ತಿದ್ದು, ದಿಗಂತ್ ಪತ್ತೆಯಾಗುವವರೆಗೆ ವಿರಮಿಸುವುದಿಲ್ಲ. ಇದಕ್ಕೆ ಎರಡು ದಿನಗಳ ಕಾಲಾವಕಾಶ ನೀಡಿ ಸಹಕರಿಸಬೇಕು’ ಎಂದರು.
ಸಂಸದ ಕ್ಯಾ.ಬ್ರಿಜೇಶ್ ಚೌಟ ಮಾತನಾಡಿ, ‘ಗಾಂಜಾ ವಿರುದ್ಧ ಪೊಲೀಸರು ತನಿಖೆ ಮುಂದುವರಿಸಿ ಸೂಕ್ತ ಕಾನೂನು ಕ್ರಮ ಕೈಗೊಂಡರೆ ಇಂಥ ಘಟನೆಗಳು ಮರುಕಳಿಸುವುದಿಲ್ಲ’ ಎಂದರು.
ಶಾಸಕರಾದ ಹರೀಶ್ ಪೂಂಜ, ಡಾ.ವೈ.ಭರತ್ ಶೆಟ್ಟಿ, ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ಎರಡು ದಿನಗಳಲ್ಲಿ ಬಾಲಕ ಪತ್ತೆಯಾಗದಿದ್ದರೆ, ಜಿಲ್ಲೆಯಾದ್ಯಂತ ಪ್ರತಿಭಟನೆ ತೀವ್ರಗೊಳಿಸುವುದಾಗಿ ಎಚ್ಚರಿಸಿದರು.
ಪ್ರಮುಖರಾದ ಉಮೇಶ್ ಶೆಟ್ಟಿ ಬರ್ಕೆ, ವಕೀಲ ಪ್ರಸಾದ್ ಕುಮಾರ್ ರೈ, ಭರತ್ ಕುಮ್ಡೇಲು, ತಾರಾನಾಥ ಕೊಟ್ಟಾರಿ ತೇವು, ನಂದನ್ ಮಲ್ಯ, ಧನರಾಜ್ ತೇವು, ಮನೋಜ್ ಆಚಾರ್ಯ ನಾಣ್ಯ, ರವೀಂದ್ರ ಕಂಬಳಿ ಭಾಗವಹಿಸಿದ್ದರು.
