ಬೆಳ್ತಂಗಡಿ: ದಿನಾಂಕ 14-01-2026ರಂದು ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಒಡಿಲ್ನಾಳ ಗ್ರಾಮದ ಸಂಬೋಳ್ಯದಲ್ಲಿ ಸಂಭವಿಸಿದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ, ಈ ಮೊದಲು ಹೊರಡಿಸಿದ್ದ ಪತ್ರಿಕಾ ಪ್ರಕಟಣೆಯಲ್ಲಿ ಮೃತ್ಯುವಿನ ಕಾರಣ ಮುಳುಗು (ಡ್ರೌನಿಂಗ್) ಎಂದು ತಿಳಿಸಲಾಗಿತ್ತು. ಆದರೆ ಮೃತನ ತಲೆಯ ಭಾಗದಲ್ಲಿ ಕಂಡುಬಂದ ಗಾಯದಿಂದ ಸಂಶಯ ಉಂಟಾದ ಹಿನ್ನೆಲೆಯಲ್ಲಿ, ಪ್ರಕರಣದ ಸಂಪೂರ್ಣ ಹಾಗೂ ಸಮಗ್ರ ತನಿಖೆಗಾಗಿ ಹತ್ಯೆ (ಮರ್ಡರ್) ಕಲಂನ್ನು ಸೇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವೈದ್ಯಕೀಯ ನ್ಯಾಯವಿಜ್ಞಾನ (ಫಾರೆನ್ಸಿಕ್) ಹಾಗೂ ಅಂತಿಮ ಮರಣೋತ್ತರ ಪರೀಕ್ಷೆ (ಫೈನಲ್ ಪಿಎಂ) ವರದಿಗಳು ಇನ್ನೂ ಲಭ್ಯವಾಗಬೇಕಿದ್ದು, ಇದು ಹತ್ಯೆಯೇ ಅಥವಾ ಅಸಹಜ ಮರಣ (ಯುಡಿಆರ್)ವೇ ಎಂಬುದರ ಬಗ್ಗೆ ಈ ಹಂತದಲ್ಲಿ ಯಾವುದೇ ನಿರ್ಧಾರಕ್ಕೆ ಬರಲಾಗುವುದಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಈ ನಡುವೆ ಪ್ರಕರಣಕ್ಕೆ ಸಂಬಂಧಿಸಿ ಕೆಲವರು ವಿವಿಧ ಸಿದ್ಧಾಂತಗಳನ್ನು ರೂಪಿಸಿ, ಕೆಲವರನ್ನು ಆರೋಪಿಗಳೆಂದು ಊಹಾಪೋಹಗಳನ್ನು ಹರಡುತ್ತಿರುವುದು ಗಮನಕ್ಕೆ ಬಂದಿದೆ. ತನಿಖೆ ಎಲ್ಲ ಸಾಧ್ಯತೆಗಳನ್ನು ಪರಿಶೀಲಿಸುವ ದಿಸೆಯಲ್ಲಿ ಸಾಗುತ್ತಿದೆಯಾದರೂ, ವಿಚಾರಣೆಗೆ ಒಳಪಡಿಸಲಾದ ಪ್ರತಿಯೊಬ್ಬರೂ ಆರೋಪಿಗಳೇ ಎನ್ನುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ಎಲ್ಲ ಅಂಶಗಳನ್ನು ಸಮಗ್ರವಾಗಿ ಪರಿಶೀಲಿಸುವ ಸಲುವಾಗಿ ನಾಲ್ಕು ವಿಶೇಷ ತನಿಖಾ ತಂಡಗಳನ್ನು ರಚಿಸಲಾಗಿದ್ದು, ಅವು ಕಾರ್ಯನಿರ್ವಹಿಸುತ್ತಿವೆ.
ಇದಲ್ಲದೆ, ಒಂದು ಅಸಹಜ ಮರಣ (ಯುಡಿಆರ್) ಪ್ರಕರಣವನ್ನು ಈ ಪ್ರಕರಣದೊಂದಿಗೆ ಸಂಪರ್ಕಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಇದುವರೆಗೆ ಆ ಇನ್ನೊಂದು ಪ್ರಕರಣ ಹತ್ಯೆಯಾಗಿದೆ ಎಂಬುದಕ್ಕೆ ಯಾವುದೇ ಸ್ಪಷ್ಟ ಸಾಕ್ಷ್ಯ ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಯಾವುದೇ ಶಂಕಿತರ ಕುರಿತು ಹರಡಲಾಗುತ್ತಿರುವ ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು ಎಂದು ಪೊಲೀಸರು ಮನವಿ ಮಾಡಿದ್ದು, ತಪ್ಪು ಮಾಹಿತಿ ಅಥವಾ ವದಂತಿಗಳನ್ನು ಹರಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ

Leave a Reply

Your email address will not be published. Required fields are marked *

Join WhatsApp Group
error: Content is protected !!