
ಪುತ್ತೂರು: ವಿಷ ಪದಾರ್ಥ ಸೇವಿಸಿ ಅಸ್ವಸ್ಥಗೊಂಡು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದ ಬೆಟ್ಟಂಪಾಡಿಯ ಯುವಕ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಬೆಟ್ಟಂಪಾಡಿ ಗ್ರಾಮದ ತಲೆಪ್ಪಾಡಿ ನಿವಾಸಿ ಆಶ್ರಫ್ ಕೆ. ಅವರ ಪುತ್ರ ಮೊಹಮ್ಮದ್ ಸುಹೈಬ್ (19) ಮೃತ ಯುವಕ.
ಮೊಹಮ್ಮದ್ ಸುಹೈಬ್ ಅವರು ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಜ.28ರಂದು ಬೆಳಗ್ಗೆ ಯಾವುದೋ ಕಾರಣದಿಂದ ಮನನೊಂದು ಇಲಿ ಪಾಷಾಣ ಸೇವಿಸಿದ್ದಾಗಿ ತಿಳಿದುಬಂದಿದೆ. ವಿಷಯ ತಿಳಿದ ತಂದೆ ಆಶ್ರಫ್ ಅವರು ತಕ್ಷಣ ಪುತ್ತೂರು ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಪಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಯುವಕ ಮೃತಪಟ್ಟಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






