
ಮಹರಾಷ್ಟ್ರದಿಂದ ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದು ವಾಸವಾಗಿದ್ದ ದಂಪತಿ ಹಲವು ವರ್ಷಗಳಿಂದ ಇಲ್ಲಿ ಅನ್ಯೋನ್ಯವಾಗಿದ್ದರು. ಆದರೆ, ಇದ್ದಕ್ಕಿದ್ದಂತೆ ಇಬ್ಬರ ನಡುವೆ ಜಗಳ ಆರಂಭವಾಗಿದ್ದು, ಗಂಡನೇ ತನ್ನ ಹೆಂಡತಿಯನ್ನು ಕೊಲೆ ಮಾಡಿ, ಆಕೆಯ ದೇಹವನ್ನು ತುಂಡರಿಸಿ ಸೂಟ್‌ಕೇಸ್‌ಗೆ ತುಂಬಿದ್ದಾನೆ
ನಂತರ, ಹೆಂಡತಿ ಮನೆಯವರಿಗೆ ಕರೆ ಮಾಡಿ ಮಾಹಿತಿ ನೀಡಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಭೀಕರ ಹತ್ಯೆ ಮಾಡಿರುವ ಘಟನೆ ನಡೆದಿದೆ. ಮಹಾರಾಷ್ಟ್ರ ಮೂಲದ ಜೋಡಿಯೊಂದ ಉದ್ಯೋಗ ನಿಮಿತ್ತ ಬೆಂಗಳೂರಿನ ಹೊರವಲಯ ಹುಳಿಮಾವು ಸಮೀಪದ ದೊಡ್ಡ ಕಮ್ಮನಹಳ್ಳಿಯ ಮನೆಯೊಂದರಲ್ಲಿ ವಾಸವಾಗಿದ್ದರು. ರಾಕೇಶ್ ರಾಜೇಂದ್ರ ಹಾಗೂ ಗೌರಿ ಅನಿಲ್ ಸಾಂಬೆಕರ್ ಕೆಲ ವರ್ಷಗಳಿಂದ ಇಲ್ಲಿ ಅನ್ಯೋನ್ಯವಾಗಿದ್ದರು. ಆಗಾಗ್ಗೆ ಮಹಾರಾಷ್ಟ್ರಕ್ಕೂ ಹೋಗಿ ಬರುತ್ತಿದ್ದರು. ಆದರೆ, ಕೆಲ ದಿನಗಳಿಂದ ದಂಪತಿ ನಡುವೆ ಜಗಳ ನಡೆಯುತ್ತಿತ್ತು. ತಡರಾತ್ರಿ ವೇಳೆಯೂ ಇಬ್ಬರ ಜಗಳ ಪಕ್ಕದ ಮನೆಯವರಿಗೂ ಕೇಳಿಸುತ್ತಿತ್ತು.
ಆದರೆ, ಇದೀಗ ಗಂಡ ರಾಕೇಶ್‌ನೇ ತನ್ನ ಹೆಂಡತಿ ಗೌರಿಯನ್ನು ಕೊಲೆ ಮಾಡಿ, ಆಕೆಯ ದೇಹವನ್ನು ತುಂಡರಿಸಿ ಸೂಟ್‌ಕೇಸ್‌ಗೆ ತುಂಬಿದ್ದಾನೆ. ಈ ಮೃತದೇಹವನ್ನು ಬೀಸಾಡಬೇಕು ಎಂದುಕೊಂಡಾಗ ಕೊಲೆ ಮಾಡಿದ ನಂತರ ಪಶ್ಚಾತ್ತಾಪ ಉಂಟಾಗಿದ್ದು, ಹೆಂಡತಿ ಮನೆಯವರಿಗೆ ಕೊಲೆ ಮಾಡಿ, ಸೂಟ್‌ಕೇಸ್‌ಗೆ ತುಂಬಿದ್ದಾಗಿ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕೂಡಲೇ ಮಹಾರಾಷ್ಟ್ರದಲ್ಲಿರುವ ಯುವತಿ ಗೌರಿ ಮನೆಯವರು ಮುಂಬೈ ಪೊಲೀಸರನ್ನು ಸಂಪರ್ಕ ಮಾಡಿದ್ದಾರೆ. ಆಗ ಮುಂಬೈ ಪೊಲೀಸರು ಬೆಂಗಳೂರು ಪೊಲೀಸರಿಗೆ ಮಾಹಿತಿ ರವಾನಿದ್ದಾರೆ.
ಇದೀಗ ಮುಂಬೈ ಪೊಲೀಸರ ಮಾಹಿತಿ ಮೇರೆಗೆ ಹುಳಿಮಾವು ಪೊಲೀಸರು ರಾಕೇಶ್‌ನ ಮನೆಗೆ ಹೋಗಿದ್ದು, ಮೃತದೇಹವನ್ನು ವಶಕ್ಕೆ ಪಡೆದಿದ್ದಾರೆ. ನಂತರ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನಾ ಸ್ಥಳಕ್ಕೆ ಡಿಸಿಪಿ ಸಾರಾ ಫಾತಿಮಾ ಭೇಟಿ ನೀಡಿದ್ದಾರೆ.
ಪುಣೆಯಲ್ಲಿ ಸಿಕ್ಕಿಬಿದ್ದ ಆರೋಪಿ ರಾಕೇಶ್
ಹುಳಿಮಾವು ಪೊಲೀಸರು ಸಿಡಿಆರ್ ಆಧರಿಸಿ ಮಹಾರಾಷ್ಟ್ರದ ಪುಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಮಾಹಿತಿ ಆಧರಿಸಿ ಶೋಧಕಾರ್ಯ ನಡೆಸಿದಾಗ ರಾಕೇಶ್ ಪುಣೆಯಲ್ಲಿ ಸಿಕ್ಕಿಬಿದ್ದಿದ್ದಾನೆ. ಸದ್ಯ ಪುಣೆ ಪೊಲಿಸರ ವಶದಲ್ಲಿರುವ ರಾಕೇಶ್ ನನ್ನು ಬೆಂಗಳೂರಿಗೆ ಕರೆತರಲು ಹುಳಿಮಾವು ಪೊಲೀಸರ ತಂಡ ಪುಣೆಗೆ ತೆರಳುತ್ತಿದ್ದು, ಟ್ರಾನ್ಸಿಟ್ ವಾರಂಟ್ ಮೇಲೆ ಆರೋಪಿಯನ್ನು ಬೆಂಗಳೂರಿಗೆ ಕರೆತರಲಿದ್ದಾರೆ.
ಮಹತ್ವದ ಮಾಹಿತಿ ಬಿಚ್ಚಿಟ್ಟ ಡಿಸಿಪಿ ಸಾರಾ ಫಾತಿಮಾ
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಹುಳಿಮಾವು ಪೊಲೀಸರು ಸೇರಿದಂತೆ ಎಸ್ಎಫ್ಎಲ್ ತಂಡ ಸಹ ದೌಡಾಯಿಸಿ ಪರಿಶೀಲನೆ ನಡೆಸಿದೆ. ಇನ್ನು ಬೆಂಗಳೂರು ಆಗ್ನೇಯ ವಿಭಾಗ ಡಿಸಿಪಿ ಸಾರಾ ಫಾತಿಮಾ ಸ್ಥಳಕ್ಕೆ ಭೇಟಿ ಪರಿಶೀಲಿಸಿ ಬಳಿಕ ಮಾಧ್ಯಮಗಳಿಗೆ ಪ್ರಕ್ರಿಯಿಸಿದ ಅವರು, ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಇಂದು (ಮಾರ್ಚ್ 27) ಸಂಜೆ 5.30ಕ್ಕೆ ನಮ್ಮ ಕಂಟ್ರೋಲ್ ರೂಮ್ಗೆ ಮಾಹಿತಿ ಬಂದಿದೆ. ಮನೆಗೆ ಬಂದು ಪರಿಶೀಲಿಸಿದಾಗ ಬಾತ್ರೂಂನಲ್ಲಿ ಸೂಟ್ ಕೇಸ್ ಪತ್ತೆಯಾಗಿದೆ. ಸೋಕೋ ತಂಡ ಪರಿಶೀಲನೆ ವೇಳೆ ಮಹಿಳೆ ಇಡೀ ದೇಹ ಪತ್ತೆಯಾಗಿದೆ. ಪತಿ ರಾಕೇಶ್ ಖಾಸಗಿ ಕಂಪೆನಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿದ್ದ. ಈಗಾಗಲೇ ಆರೋಪಿಯನ್ನು ಪುಣೆಯಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು.






