ಪುತ್ತೂರು; ವಿಟ್ಲ ಭಾಗದ ಮುರುವ ಎಂಬಲ್ಲಿ ಅಪ್ರಾಪ್ತ ದಲಿತ ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ಪ್ರಕರಣದ ಸಮಗ್ರ ತನಿಖೆ ನಡೆಸಿ ಆರೋಪಿಯ ಮೇಲೆ ಅತ್ಯಾಚಾರದ ಪ್ರಕರಣ ದಾಖಲಿಸಬೇಕು. ಆತನಿಗೆ ಜೈಲುಶಿಕ್ಷೆ ವಿಧಿಸಬೇಕು ಎಂದು ದಲಿತ ಹಕ್ಕು ಸಮಿತಿಯ ರಾಜ್ಯ ಸಮಿತಿ ಸದಸ್ಯೆ ಈಶ್ವರಿ ಶಂಕರ್ ಪದ್ಮುಂಜ ಅವರು ಆಗ್ರಹಿಸಿದ್ದಾರೆ.
ಶನಿವಾರ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ಪ್ರಬಲ ರಾಜಕೀಯ ಪಕ್ಷವೊಂದರ ಮುಖಂಡನಾದ ಮಹೇಶ್ ಭಟ್ ಎಂಬಾತ ಮುರುವ ಎಂಬಲ್ಲಿನ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದು, ವಿಟ್ಲ ಠಾಣೆಯಲ್ಲಿ ಎಫ್‌ಐಆರ್ ಮಾಡಿಲ್ಲ. ಬಳಿಕ ಎಸ್ಪಿಯವರಿಗೆ ನಾವು ದೂರು ಕೊಟ್ಟ ಬಳಿಕ ಕೇಸು ದಾಖಲಿಸಲಾಯಿತು. ಈ ಪ್ರಕರಣಕ್ಕೆ ಸಂಬAಧಿಸಿ ಸಂತ್ರಸ್ಥೆ ವಿದ್ಯಾರ್ಥಿನಿಯನ್ನು `ಕೌನ್ಸಿಲಿಂಗ್’ ಮತ್ತು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಬೇಕು. ಈಗ ಹಾಕಿರುವ ಕೇಸು ಪ್ರಬಲವಾಗಿಲ್ಲ. ಆತನ ಮೇಲೆ ಅತ್ಯಂತ ಕಠಿಣವಾದ ಪ್ರಕರಣ ದಾಖಲಿಸಬೇಕು. ಯಾವುದೇ ಒತ್ತಡಕ್ಕೆ ಮಣಿಯದೆ ಆರೋಪಿಯನ್ನು ಬಂಧಿಸಬೇಕು. ಆತನಿಗೆ ಕಠಿಣ ಶಿಕ್ಷೆ ಎಂದು ಅವರು ಒತ್ತಾಯಿಸಿದರು.
ಬಿಜೆಪಿ ಯಾಕೆ ಮೌನ
ಹೆಣ್ಣುಮಕ್ಕಳಿಗೆ ತೊಂದರೆಯಾದರೆ ನಾವು ಯಾವ ಹೋರಾಟಕ್ಕೂ ಸಿದ್ಧ ಎಂದು ಹೇಳುವ ಬಿಜೆಪಿ ಪಕ್ಷ ಈಗ ಯಾಕೆ ಮೌನವಾಗಿದೆ. ಬಿಜೆಪಿ ಮುಖಂಡನಿAದ ಓರ್ವ ದಲಿತ ಅಪ್ರಾಪ್ತ ವಿದ್ಯಾರ್ಥಿನಿಗೆ ಆಗಿರುವ ಲೈಂಗಿಕ ವಿಚಾರದ ಬಗ್ಗೆ ಬಿಜೆಪಿ ಯಾಕೆ ಮಾತನಾಡುವುದಿಲ್ಲ. ಬಿಜೆಪಿ ಭೂಮಾಲೀಕರ ಪರವಾಗಿದೆಯೋ ಅಥವಾ ದಲಿತ ಹೆಣ್ಣು ಮಗಳ ಪರವಾಗಿದೆಯೋ ಎಂಬುವುದನ್ನು ಸ್ಪಷ್ಟ ಪಡಿಸಬೇಕು ಎಂದು ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಪ್ರಶ್ನಿಸಿದರು.
ಬೆದರಿಕೆ ಒಡ್ಡಿದವನ ವಿರುದ್ಧ ದೂರು
ಈ ಪ್ರಕರಣಕ್ಕೆ ಸಂಬAಧಿಸಿ ಆರೋಪಿ ಮಹೇಶ್ ಭಟ್ ಪರವಾಗಿರುವ ಹರೀಶ ಮಣಿಯಾಣಿ ಎಂಬಾತ ಸಂತ್ರಸ್ಥೆ ಬಾಲಕಿಯ ಮನೆಯವರಿಗೆ ಜೀವಬೆದರಿಕೆ ಒಡ್ಡಿದ್ದು, ಆತನಿಂದ ಈ ಕುಟುಂಬಕ್ಕೆ ಪ್ರಾಣಾಪಾಯದ ಭೀತಿ ಉಂಟಾಗಿದೆ. ಹಾಗಾಗಿ ಈತನನ್ನು ತಕ್ಷಣ ಬಂಧಿಸಬೇಕು. ಈತನ ಬಗ್ಗೆ ವಿಟ್ಲಠಾಣೆಗೆ ಬಾಲಕಿ ತಂದೆ ದೂರು ನೀಡಿದ್ದಾರೆ. ತಕ್ಷಣ ದೂರಿನಂತೆ ಪ್ರಕರಣ ದಾಖಲಿಸಬೇಕು ಎಂದು ಅವರು ಒತ್ತಾಯಿಸಿದರು.
ಪ್ರತಿಭಟನೆಗೆ ಸಿದ್ಧತೆ
ಲೈಂಗಿಕ ಕಿರುಕುಳಕ್ಕೆ ಒಳಗಾದ ಹುಡುಗಿಯ ವೈದ್ಯಕೀಯ ತಪಾಸಣೆಯಿಂದ ಸತ್ಯಾಸತ್ಯತೆ ಬಯಲಾಗಬೇಕು. ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಆರೋಪಿಯ ಪರವಾಗಿರುವ ಹರೀಶ್ ಮಣಿಯಾಣಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ವಿಟ್ಲ ಬಳಿಯ ಮುರುವ ಎಂಬಲ್ಲಿ ಮಾ.೩೦ರಂದು ಸಭೆ ನಡೆಸಲಿದ್ದೇವೆ. ಎಪ್ರಿಲ್ ತಿಂಗಳ ಮೊದಲ ವಾರದಲ್ಲಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ದಲಿತ ಹಕ್ಕು ಸಮಿತಿ ಜಿಲ್ಲಾಧ್ಯಕ್ಷ ಕೃಷ್ಣಪ್ಪ ಕೊನಾಜೆ, ಜಿಲ್ಲಾ ಸಮಿತಿ ಕಾರ್ಯದರ್ಶಿ ಕೃಷ್ಣ ತಣ್ಣೀರುಬಾವಿ, ಮುರುವ ಘಟಕದ ಕಾರ್ಯದರ್ಶಿ ಪುಷ್ಪರಾಜ್ ಉಪಸ್ಥಿತರಿದ್ದರು.














