ಮಂಗಳೂರು: ಮಹಿಳೆಯೊಬ್ಬರಿಂದ ಬಂಗಾರದ ಸರ ಕಸಿದುಕೊಂಡು ಪರಾರಿಯಾಗಿದ್ದ ಪ್ರಕರಣದಲ್ಲಿ ಪೊಲೀಸರ ವಶದಿಂದ ತಪ್ಪಿಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ವಿಶೇಷ ಪೊಲೀಸ್ ತಂಡ ವಿಜಯಪುರದಲ್ಲಿ ಬಂಧಿಸಿದೆ.ಜೂನ್ 14ರಂದು ಸೂಟರ್‌ಪೇಟೆ ಗ್ರಾಮ ಲೆಕ್ಕಾಧಿಕಾರಿ ಕಚೇರಿ ಸಮೀಪ ಮಹಿಳೆಯೊಬ್ಬರ ಬಂಗಾರದ ಸರವನ್ನು ಕಸಿದುಕೊಂಡು ಮೋಟಾರ್‌ಸೈಕಲ್‌ನಲ್ಲಿ ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದರು.ಜೂನ್ 26ರಂದು ಪಾಂಡೇಶ್ವರದ ರೋಸಾರಿಯೋ ಶಾಲೆ ಸಮೀಪ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ಯುತ್ತಿದ್ದ ವೇಳೆ, ಪ್ರಮುಖ ಆರೋಪಿ ಬಾಗಲಕೋಟೆ ನಿವಾಸಿ ಅಲ್ತಾಫ್ ಹುಸೈನ್ ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ, ತಳ್ಳಿಕೊಂಡು ಪರಾರಿಯಾಗಿದ್ದ. ಘಟನೆಯಲ್ಲಿ ಪೊಲೀಸ್ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಈ ಕುರಿತು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಈ ಪ್ರಕರಣದಲ್ಲಿ ಉತ್ತರ ಪ್ರದೇಶದ ನಿವಾಸಿಗಳಾದ ರವಿ ಬೌರಾ ಹಾಗೂ ಮೊಹಮ್ಮದ್ ಸಾಹೀಲ್ ಸಿದ್ದೀಖಿ ಅಲಿಯಾಸ್ ಮೊಹಮ್ಮದ್ ಸಾಹಿಲ್ ಅವರನ್ನು ಬಂಧಿಸಿ, ಅವರಿಂದ ಕಳವು ಮಾಡಿದ್ದ ಚಿನ್ನದ ಸರ ಹಾಗೂ ಬೈಕ್‌ನ್ನು ವಶಪಡಿಸಿಕೊಳ್ಳಲಾಗಿತ್ತು.ಪೊಲೀಸರ ವಶದಿಂದ ಪರಾರಿಯಾಗಿದ್ದ ಅಲ್ತಾಫ್ ಹುಸೈನ್‌ನ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿತ್ತು. ನಿರಂತರ ಕಾರ್ಯಾಚರಣೆ ನಡೆಸಿದ ತಂಡಕ್ಕೆ ಆರೋಪಿಯು ವಿಜಯಪುರ ನಗರದಲ್ಲಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿತ್ತು.ಅದರಂತೆ ಆ.10ರಂದು ವಿಜಯಪುರ ನಗರದಲ್ಲಿ ಪಾಂಡೇಶ್ವರ ದಕ್ಷಿಣ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಮಾರುತಿ ಪಿ. ಹಾಗೂ ಸಿಬ್ಬಂದಿಗಳಾದ ಲಕ್ಷ್ಮಣ ಸಾಲೋಟಗಿ, ಸಾಗರ್ ಮತ್ತು ಆಂಜನೇಯ ಅವರು ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ಬೆನ್ನಟ್ಟಿ ಬಂಧಿಸಿದ್ದಾರೆ.ಬಂಧಿತ ಆರೋಪಿಯನ್ನು ಮುಂದಿನ ಕಾನೂನು ಕ್ರಮಕ್ಕಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಅಲ್ತಾಫ್ ಹುಸೈನ್ ವಿರುದ್ಧ ರಾಜ್ಯದ ವಿವಿಧೆಡೆ ಆರು ಪ್ರಕರಣಗಳು ದಾಖಲಾಗಿರುವುದು ತನಿಖೆಯಿಂದ ತಿಳಿದುಬಂದಿದೆ










