ಮಂಗಳೂರು: ಸುರತ್ಕಲ್ ಮಧ್ಯ ಕೊಡಿಪಾಡಿಯ ಕೋರ್ದಗಬ್ಬು ದೈವಸ್ಥಾನದ ಕಾಣಿಕೆ ಹುಂಡಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.ಆ.5ರಂದು ಬೆಳಗಿನ ಜಾವ ಸುಮಾರು 1.30ರ ವೇಳೆಗೆ ಕಳ್ಳನೊಬ್ಬ ಕಬ್ಬಿಣದ ಆಯುಧ ಬಳಸಿ ದೈವಸ್ಥಾನದ ಬಾಗಿಲು ಹಾಗೂ ಕಿಟಕಿಯನ್ನು ಮುರಿದು ಒಳನುಗ್ಗಿ, ಕಾಣಿಕೆ ಹುಂಡಿಯನ್ನು ಕಳವು ಮಾಡಿದ್ದ. ಹುಂಡಿಯಲ್ಲಿದ್ದ ಸುಮಾರು ₹15,000 ನಗದು ಕಳವು ಮಾಡಲಾಗಿತ್ತು.ಈ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಪತ್ತೆಗಾಗಿ ವಿಶೇಷ ಕಾರ್ಯಾಚರಣೆ ನಡೆಸಲಾಗಿತ್ತು. ಆ.10ರಂದು ಖಚಿತ ಮಾಹಿತಿಯ ಮೇರೆಗೆ ಸುರತ್ಕಲ್ ರೈಲ್ವೆ ನಿಲ್ದಾಣದಲ್ಲಿ ಉಡುಪಿ ಕುಕ್ಕಿಕಟ್ಟೆ ನಿವಾಸಿ ಸುಖೇಶ್ ನಾಯ್ಕ್ (40) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ.ಆರೋಪಿಯನ್ನು ಆ.11ರಂದು ಮಂಗಳೂರು ನಗರದ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.ಆರೋಪಿಯ ವಿರುದ್ಧ ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ 18 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ ಒಂದು ಪ್ರಕರಣದಲ್ಲಿ ಶಿಕ್ಷೆಯಾಗಿರುವುದು ತನಿಖೆಯಿಂದ ತಿಳಿದುಬಂದಿದೆ. ಅಲ್ಲದೆ, ಉಡುಪಿ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಆರೋಪಿಯ ವಿರುದ್ಧ ದಸ್ತಗಿರಿ ವಾರಂಟ್‌ಗಳು ಇರುವುದೂ ಪತ್ತೆಯಾಗಿದೆ.










