ಮಂಗಳೂರು: ಕಟ್ಟಡದ ಮೇಲ್ಛಾವಣಿಗೆ ಕಬ್ಬಿಣದ ಶೀಟ್ ಅಳವಡಿಸುವ ವೇಳೆ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿ ಕಾರ್ಮಿಕರೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಕಾಟಿಪಳ್ಳ ಗ್ರಾಮದ 6ನೇ ಬ್ಲಾಕ್‌ನಲ್ಲಿ ಆ.10ರಂದು ನಡೆದಿದೆ.ಮೃತರನ್ನು ಚೊಕ್ಕಬೆಟ್ಟು, ಕೃಷ್ಣಾಪುರ ನಿವಾಸಿ ಭಾಸ್ಕರ ಜಿ. ಕರ್ಕೇರ (65) ಎಂದು ಗುರುತಿಸಲಾಗಿದೆ.6ನೇ ಬ್ಲಾಕ್‌ನ ಜಿಮ್ ಇಕ್ಬಾಲ್ ಅವರಿಗೆ ಸಂಬಂಧಿಸಿದ ಕಟ್ಟಡದಲ್ಲಿ ಕಬ್ಬಿಣದ ಶೀಟ್ ಅಳವಡಿಸುವ ಕೆಲಸ ನಡೆಯುತ್ತಿತ್ತು. ಕಟ್ಟಡದ ಸಮೀಪವೇ ಹೈಟೆನ್ಷನ್ ವಿದ್ಯುತ್ ತಂತಿ ಹಾದು ಹೋಗಿದ್ದು, ಮುಂಜಾಗ್ರತಾ ಕ್ರಮವಾಗಿ ಕೈಗವಸು ಸೇರಿದಂತೆ ಅಗತ್ಯ ಸುರಕ್ಷತಾ ವ್ಯವಸ್ಥೆ ಮಾಡದೆ ಹಾಗೂ ವಿದ್ಯುತ್ ತಂತಿಗೆ ಯಾವುದೇ ರಕ್ಷಣಾ ಕವಚ ಅಳವಡಿಸದೆ ಕೆಲಸ ಮಾಡಿಸಲಾಗುತ್ತಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.ಆ.10ರಂದು ಸಂಜೆ ಸುಮಾರು 4 ಗಂಟೆಗೆ ಭಾಸ್ಕರ ಅವರು ಕಬ್ಬಿಣದ ಪೈಪ್ ಹಿಡಿದು ಶೀಟ್ ಅಳವಡಿಸುವ ಕೆಲಸ ಮಾಡುತ್ತಿದ್ದ ವೇಳೆ ಪೈಪ್ ಹೈಟೆನ್ಷನ್ ತಂತಿಗೆ ತಾಗಿದೆ. ಪರಿಣಾಮ ವಿದ್ಯುತ್ ಪ್ರವಹಿಸಿ ಭಾಸ್ಕರ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಜಿಮ್ ಇಕ್ಬಾಲ್ ಅವರನ್ನು ಆರೋಪಿಯಾಗಿ ಹೆಸರಿಸಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.










