ಕಡಬ: ರಾಮಕುಂಜ ಗ್ರಾಮದ ಆತೂರಿನಲ್ಲಿ ಮನೆಯೊಂದರಲ್ಲಿದ್ದ ಫ್ರಿಡ್ಜ್ ಏಕಾಏಕಿ ಭಾರೀ ಸದ್ದಿನೊಂದಿಗೆ ಸ್ಫೋಟಗೊಂಡು, ಮನೆಗೆ ವ್ಯಾಪಕ ಹಾನಿಯಾದ ಘಟನೆ ಆ.11ರಂದು ಸಂಜೆ ನಡೆದಿದೆ.ಆತೂರು ನಿವಾಸಿ, ಪ್ರಸ್ತುತ ವಿದೇಶದಲ್ಲಿ ಉದ್ಯೋಗದಲ್ಲಿರುವ ಸಿದ್ದೀಕ್ ಅವರ ಮನೆಯಲ್ಲಿ ಘಟನೆ ಸಂಭವಿಸಿದೆ. ಸಂಜೆ ವೇಳೆ ಫ್ರಿಡ್ಜ್‌ನಲ್ಲಿ ತಾಂತ್ರಿಕ ದೋಷ ಅಥವಾ ಶಾರ್ಟ್‌ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದ್ದು, ಬಳಿಕ ಭಾರೀ ಸದ್ದಿನೊಂದಿಗೆ ಸ್ಫೋಟಗೊಂಡಿದೆ ಎನ್ನಲಾಗಿದೆ.ಸ್ಫೋಟದ ತೀವ್ರತೆಗೆ ಮನೆಯ ಗೋಡೆ, ಮೇಲ್ಛಾವಣಿ ಹಾಗೂ ಪೀಠೋಪಕರಣಗಳಿಗೆ ಹಾನಿಯಾಗಿದೆ. ಸ್ಫೋಟದ ಬೆನ್ನಲ್ಲೇ ಬೆಂಕಿ ವ್ಯಾಪಿಸಿದ್ದರಿಂದ ಮನೆಯಲ್ಲಿದ್ದ ಇತರ ಎಲೆಕ್ಟ್ರಾನಿಕ್ ಉಪಕರಣಗಳು ಹಾಗೂ ಸಾಮಗ್ರಿಗಳು ಸುಟ್ಟುಹೋಗಿವೆ.ಘಟನೆ ವೇಳೆ ಮನೆಯಲ್ಲಿ ಸಿದ್ದೀಕ್ ಅವರ ಪತ್ನಿ ಆರೀಫಾ ಮಾತ್ರ ಇದ್ದರು. ಅದೃಷ್ಟವಶಾತ್ ಅವರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.ಬೆಂಕಿ ಕಾಣಿಸಿಕೊಂಡ ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಸ್ಥಳೀಯ ಯುವಕರಾದ ಅಝೀಝ್ ಹಳ್ಯಾರ, ಅಝೀಝ್ ಪಲ್ತಾಡಿ, ಸಿಹಾಬ್ ಗೋಳಿತ್ತಾಡಿ, ಲತೀಫ್ ನೆಲ್ಯಾಟ್ಟು, ಅನ್ಸಾರ್ ಕುಟೇಲ್ ನೀರಾಜೆ, ಜನಾರ್ದನ ರಾಮಕುಂಜ, ಅಶ್ರಫ್ ಪಟ್ಟೆ, ಖಾದರ್ ಬಿಜತಲಿ, ಫಾರೂಕ್ ಎಲ್ಯಂಗ, ಶಂಶಿರ್ ಗೋಳಿತ್ತಾಡಿ, ಫಾರೂಕ್ ಅಮೈ, ನಿಝರ್ ಮೊಟ್ಟೆತಡ್ಕ ಹಾಗೂ ರಝಕ್ ಬೂಮಿಕ ಅವರು ಬೆಂಕಿ ನಂದಿಸಲು ಸಹಕರಿಸಿದರು.










