ಪುತ್ತೂರು: ಮಂತ್ರಾಲಯಕ್ಕೆ ತೆರಳಿ ವಾಪಸಾಗುತ್ತಿದ್ದ ಪುತ್ತೂರು ಮೂಲದ ಉದ್ಯಮಿಯೊಬ್ಬರು ಬಳ್ಳಾರಿ ಬಸ್ ನಿಲ್ದಾಣದಲ್ಲಿ ಹೃದಯಾಘಾತಕ್ಕೊಳಗಾಗಿ ಮೃತಪಟ್ಟ ಘಟನೆ ನಡೆದಿದೆ.ಬೆಳಿಯೂರುಕಟ್ಟೆ ಮೂಲದವರಾಗಿದ್ದು, ಸದ್ಯ ಮಂಗಳೂರಿನಲ್ಲಿ ವಾಸವಾಗಿದ್ದ ಸಂದೀಪ್ ಶೆಟ್ಟಿ (44) ಮೃತರು.ಆ.9ರಂದು ಮಂಗಳೂರಿನಿಂದ ಬಸ್‌ನಲ್ಲಿ ಮಂತ್ರಾಲಯಕ್ಕೆ ತೆರಳಿದ್ದ ಸಂದೀಪ್ ಶೆಟ್ಟಿಯವರು ವಾಪಸಾಗುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಆ.10ರಂದು ರಾತ್ರಿ ಬಸ್ ಬಳ್ಳಾರಿಯ ಎಪಿಎಂಸಿ ಬಸ್ ನಿಲ್ದಾಣದಲ್ಲಿ ತಂಗಿದ್ದ ವೇಳೆ, ರಾತ್ರಿ ಸುಮಾರು 2.30ಕ್ಕೆ ಅವರು ಬಸ್‌ನಿಂದ ಇಳಿದು ಬಸ್ ನಿಲ್ದಾಣದಲ್ಲಿ ಕುಳಿತಿದ್ದರು. ಮುಂಜಾನೆ ಸುಮಾರು 4 ಗಂಟೆಯ ವೇಳೆಗೆ ಅವರು ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.ವಿಷಯ ತಿಳಿದ ಪ್ರಯಾಣಿಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಸ್ ನಿಲ್ದಾಣದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಘಟನೆ ಖಚಿತಪಡಿಸಿಕೊಂಡಿದ್ದಾರೆ. ಬಳಿಕ ಮೃತರ ಪುತ್ರನ ಮೊಬೈಲ್‌ಗೆ ಪೊಲೀಸರು ಸಂದೇಶ ಕಳುಹಿಸಿ ವಿಷಯ ತಿಳಿಸಿದ್ದಾರೆ.ಪಿಯುಸಿ ವಿದ್ಯಾರ್ಥಿಯಾಗಿರುವ ಪುತ್ರ ದೃಪದ್ ಅವರು ಕಾಲೇಜಿನಲ್ಲಿ ಮೊಬೈಲ್ ಅನ್ನು ಸೈಲೆಂಟ್ ಮೋಡ್‌ನಲ್ಲಿಟ್ಟಿದ್ದರಿಂದ ಸಂದೇಶ ಗಮನಕ್ಕೆ ಬರುವುದು ತಡವಾಗಿದೆ. ಮಧ್ಯಾಹ್ನದ ಬಳಿಕ ಸಂದೇಶ ಗಮನಿಸಿದ ಅವರು ತಾಯಿಯ ಸೋದರ ಮಾವ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿಯವರಿಗೆ ವಿಷಯ ತಿಳಿಸಿದ್ದಾರೆ. ಬಳಿಕ ಜಗದೀಶ್ ಶೆಟ್ಟಿ, ಮೃತರ ಪತ್ನಿ ಹಾಗೂ ಪುತ್ರ ಆ.11ರಂದು ಸಂಜೆ ಬಳ್ಳಾರಿಗೆ ತೆರಳಿದ್ದು, ಮೃತದೇಹವನ್ನು ಊರಿಗೆ ತರಲು ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.ಆ.26ರಂದು ಮತ್ತೆ ವಿದೇಶಕ್ಕೆ ತೆರಳುವವರಿದ್ದರುಬೆಳಿಯೂರುಕಟ್ಟೆಯ ನಾರಾಯಣ ಶೆಟ್ಟಿ-ಕುಮುದಾ ದಂಪತಿಯ ಪುತ್ರರಾದ ಸಂದೀಪ್ ಶೆಟ್ಟಿಯವರು ಈ ಹಿಂದೆ ಪುತ್ತೂರಿನಲ್ಲಿ ರಿಯಲ್ ಎಸ್ಟೇಟ್ ಸೇರಿದಂತೆ ವಿವಿಧ ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದರು. ಬಳಿಕ ಮಂಗಳೂರಿಗೆ ತೆರಳಿ ಆರಂಭದಲ್ಲಿ ಖಾಸಗಿ ಆಸ್ಪತ್ರೆಯೊಂದರಲ್ಲಿ ಉದ್ಯೋಗ ನಿರ್ವಹಿಸಿ, ನಂತರ ಸ್ವಂತ ಉದ್ಯಮ ಆರಂಭಿಸಿದ್ದರು.ಕೆಲ ವರ್ಷಗಳ ಹಿಂದೆ ವಿದೇಶಕ್ಕೆ ತೆರಳಿದ್ದ ಅವರು ಇತ್ತೀಚೆಗೆ ಊರಿಗೆ ಮರಳಿದ್ದರು. ಆ.26ರಂದು ಮತ್ತೆ ವಿದೇಶಕ್ಕೆ ತೆರಳುವ ಸಿದ್ಧತೆಯಲ್ಲಿದ್ದರು. ಆದರೆ ವಿಧಿಯಾಟವೇ ಬೇರೆಯಾಗಿದ್ದು, ಬಳ್ಳಾರಿಯಲ್ಲಿ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ.ಮೃತರು ಪತ್ನಿ ವಿದ್ಯಾ ಶೆಟ್ಟಿ, ಪುತ್ರ ದೃಪದ್, ತಾಯಿ ಕುಮುದಾ ಹಾಗೂ ಸಹೋದರ ದಿಲೀಪ್ ಅವರನ್ನು ಅಗಲಿದ್ದಾರೆ.











