ನವದೆಹಲಿ: ಸಂಸತ್ತಿನ ಅಧಿವೇಶನದಲ್ಲಿ ವಿಪಕ್ಷಗಳ ಗದ್ದಲ ನಡುವೆಯೇ ಮಂಗಳವಾರ ಲೋಕಸಭೆಯಲ್ಲಿ ‘ಕೇರಳ’ ರಾಜ್ಯದ ಹೆಸರನ್ನು ‘ಕೇರಳಂ’ ಎಂದು ಬದಲಾಯಿಸುವ ಮಸೂದೆ ಸೇರಿದಂತೆ ಎರಡು ಪ್ರಮುಖ ವಿಧೇಯಕಗಳನ್ನು ಯಾವುದೇ ಚರ್ಚೆಯಿಲ್ಲದೆ ಅಂಗೀಕರಿಸಲಾಯಿತು.ಅಯೋಧ್ಯೆಯ ರಾಮಮಂದಿರದಲ್ಲಿ ದೇಣಿಗೆ ಕಳವು ಹಾಗೂ ಜಾರ್ಖಂಡ್‌ನಲ್ಲಿ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಕ್ರಮದ ಕುರಿತು ಗೃಹ ಸಚಿವ ಅಮಿತ್ ಶಾ ಅವರು ಸದನಕ್ಕೆ ಆಗಮಿಸಿ ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿ ವಿಪಕ್ಷ ಸಂಸದರು ಸ್ಪೀಕರ್ ಪೀಠದ ಮುಂದೆ ಬಾವಿಗಿಳಿದು ಪ್ಲೇಕಾರ್ಡ್ ಹಿಡಿದು ಜೋರಾಗಿ ಘೋಷಣೆ ಕೂಗಿದರು. ಮಧ್ಯಾಹ್ನ 2 ಗಂಟೆಗೆ ಸದನ ಪುನರಾರಂಭಗೊಂಡಾಗ ವಿಪಕ್ಷಗಳ ತೀವ್ರ ಗದ್ದಲದ ನಡುವೆಯೇ ಅಧ್ಯಕ್ಷತೆ ವಹಿಸಿದ್ದ ಕೃಷ್ಣ ಪ್ರಸಾದ್ ತೆನ್ನೇಟಿ ಅವರು ಕಲಾಪ ಮುಂದುವರಿಸಿದರು.ಈ ವೇಳೆ ಕೇಂದ್ರ ಗೃಹ ರಾಜ್ಯ ಸಚಿವ ನಿತ್ಯಾನಂದ್ ರೈ ಅವರು ಕೇರಳ ರಾಜ್ಯದ ಹೆಸರನ್ನು ‘ಕೇರಳಂ’ ಎಂದು ಅಧಿಕೃತವಾಗಿ ಬದಲಾಯಿಸುವ ‘ಕೇರಳ (ಹೆಸರು ಮಾರ್ಪಾಡು) ವಿಧೇಯಕ, 2026’ ಅನ್ನು ಮಂಡಿಸಿದರು. ಕೋಲಾಹಲದ ನಡುವೆಯೇ ಈ ವಿಧೇಯಕಕ್ಕೆ ಧ್ವನಿಮತದ ಅಂಗೀಕಾರ ದೊರೆಯಿತು. ಈ ವೇಳೆ ಮಾತನಾಡಿದ ನಿತ್ಯಾನಂದ ರಾಯ್, “ಕಾಂಗ್ರೆಸ್ ಪಕ್ಷಕ್ಕೆ ಹೆಸರು ಬದಲಾಯಿಸುವುದು ಇಷ್ಟವಿದ್ದಂತೆ ಕಾಣುತ್ತಿಲ್ಲ” ಎಂದು ವ್ಯಂಗ್ಯವಾಡಿದರು.ಇದರ ಬೆನ್ನಲ್ಲೇ ಸಹಕಾರ ರಾಜ್ಯ ಸಚಿವ ಮುರಳೀಧರ್ ಮೊಹೋಲ್ ಅವರು ಮಂಡಿಸಿದ ‘ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮ (ತಿದ್ದುಪಡಿ) ವಿಧೇಯಕ, 2026’ ಅನ್ನು ಸಹ ಯಾವುದೇ ಚರ್ಚೆಯಿಲ್ಲದೆ ಧ್ವನಿಮತದಿಂದ ಅಂಗೀಕರಿಸಲಾಯಿತು.ಈ ಮುಂಗಾರು ಅಧಿವೇಶನದಲ್ಲಿ ಲೋಕಸಭೆಯಲ್ಲಿ ಇದುವರೆಗೆ ಒಟ್ಟು 11 ವಿಧೇಯಕಗಳು ಅಂಗೀಕಾರಗೊಂಡಿದ್ದು, ಅವುಗಳಲ್ಲಿ ಕೇವಲ 2 ವಿಧೇಯಕಗಳ ಮೇಲಷ್ಟೇ ಚರ್ಚೆ ನಡೆದಿದೆ. ಉಳಿದ 9 ವಿಧೇಯಕಗಳನ್ನು ವಿಪಕ್ಷಗಳ ನಿರಂತರ ಪ್ರತಿಭಟನೆಯ ನಡುವೆಯೇ ಚರ್ಚೆಯಿಲ್ಲದೆ ಪಾಸ್ ಮಾಡಲಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!