
ಪೂರ್ತಿ ಒಂದು ತಿಂಗಳ ಕಾಲ ಉಪವಾಸ ಆಚರಿಸಿ ರಮದಾನ್ ತಿಂಗಳನ್ನು ಬೀಳ್ಕೊಡುವಾಗ ಸಹಜವಾಗಿ ಉಂಟಾಗುವ ಸಡಗರ ಸಂಭ್ರಮವನ್ನು ಅರ್ಥ ಪೂರ್ಣವಾಗಿ ಆಚರಿಸುವುದೇ ಈದುಲ್ ಫಿತ್ರ್ ಹಬ್ಬದ ವಿಶೇಷತೆ.
ಜಾಗತಿಕವಾಗಿ ಪ್ರತಿಯೊಬ್ಬ ಮುಸಲ್ಮಾನ ಭಾವನಾತ್ಮಕವಾಗಿ ಈ ರಮದಾನ್ ತಿಂಗಳನ್ನು ಬಹಳ ಶೃದ್ದೆ ಭಕ್ತಿಯಿಂದ ಆಚರಿಸುತ್ತಾನೆ.
ಸುಮಾರು ಹನ್ನೆರಡು ತಾಸು ಹಗಲು ಒಂದು ಹನಿ ನೀರು ಕೂಡಾ ಸೇವಿಸದೇ ಕಟ್ಟುನಿಟ್ಟಾಗಿ ಉಪವಾಸ ಇದ್ದು ಕೊಂಡು ಅದರ ಜೊತೆಗೆ ಹಲವಾರು ಮತ್ತಿತರ ಸತ್ಕರ್ಮಗಳ ಮೂಲಕ ಆತ್ಮ ಸಂಸ್ಕರಣೆ ಮಾಡಿ ದೇವನಿಗೆ ಹತ್ತಿರವಾಗಲು ಪ್ರಯತ್ನ ಪಡುವುದೇ ಈ ವೃತಾನುಷ್ಟಾನದ ಉದ್ದೇಶ.
ಹೆಣ್ಣಿರಲಿ ಗಂಡಿರಲಿ ಒಬ್ಬ ವ್ಯಕ್ತಿಯ ಯಶಸು ಬರೀ ಅರ್ಥಿಕ ಸುಧಾರಣೆಯೋ ಮತ್ತಿತರ ಬೌತಿಕ ಸಂಪನ್ಮೂಲದ ಕ್ರೋಡೀಕರಣವೊ ಆಗಿರುವುದಿಲ್ಲ.
ಬದಲಾಗಿ ಆತ್ಮ ಸಾಕ್ಷಾತ್ಕಾರದ ಮೂಲಕ ಗಳಿಸುವ ಮನೋ ಸಂತೃಪ್ತ ಜೀವನವೇ ಸಾರ್ಥಕ ಬದುಕಿನ ರಹಸ್ಯ.
ಕೋಟ್ಯಾಧಿಪಥಿಯಾಗಿದ್ದರೂ ,ಜನ ಮನ್ನಣೆ ಪಡೆದಿದ್ದರೂ ನೆಮ್ಮದಿ ಇಲ್ಲದ ಬದುಕು ವ್ಯರ್ಥವೇ ಸರಿ.
ಧಾರ್ಮಿಕ ನಂಬಿಕೆಗಳು, ದೇವ ಸ್ಮರಣೆಯು ಜನರಿಗೆ ಸಾಕಷ್ಟು ಸಂತೃಪ್ತಿಯನ್ನು ಗಳಿಸಿ ಕೊಡುತ್ತಿದೆ ಎಂಬುದನ್ನು ಯಾರಿಂದಲೂ ನಿರಾಕರಿಸಲು ಅಸಾದ್ಯ.
ಅಸಲಿಗೆ ಜಗತ್ತಿನಲ್ಲಿರುವ ಎಲ್ಲಾ ಧರ್ಮಗಳ ಮೂಲ ಗುರಿ ಜನರ ಬದುಕನ್ನು ಸಂತಸ ದಾಯಕ ಗೊಳಿಸುವುದೇ ಆಗಿದೆ.
ಜನರ ಬದುಕನ್ನು ದುಸ್ತರ ಗೊಳಿಸುವ ಆಚಾರ ವಿಚಾರಗಳು ಧರ್ಮ ಎನಿಸಲಾರದು.
ಮನುಷ್ಯರು ಜಗತ್ತಿನಲ್ಲಿ ಸಹಜೀವಿಗಳಾಗಿ ಬಾಳಿ ಬದುಕ ಬೇಕಾದವರು.
ಯಾವುದೇ ಧರ್ಮೀಯರಾದರೂ ಯಾವುದೇ ದೇಶದವರಾದರೂ ಒಬ್ಬರಿಗೊಬ್ಬರು ಒಂದಲ್ಲೊಂದು ರೀತಿಯಲ್ಲಿ ಪರಸ್ಪರ ಸಂಬಂಧವನ್ನು ಹೊಂದಿರಬೇಕಾಗುತ್ತದೆ.
ಇನ್ನೊಂದು ಜಾತಿ ಧರ್ಮ ದೇಶದವರ ಸಹಕಾರ ಇಲ್ಲದೇ ಬದುಕಲು ಯಾರಿಂದಲೂ ಸಾದ್ಯವಲ್ಲ.
ಗಡಿ, ಭಾಷೆ,ಧರ್ಮ,ಜಾತಿ,ಕರಿಯ,ಬಿಳಿಯ,ಹೆಣ್ಣು,ಗಂಡು,ಶ್ರೀಮಂತ,ಬಡವ ಎಂಬಿತ್ಯಾದಿ ಅಂಶಗಳನ್ನು ಮೂಲವಾಗಿಟ್ಟು ಕೊಂಡು ಪರಸ್ಪರ ಶೋಷಣೆಗೈದು, ಭೇದಭಾವವನ್ನು ಉಂಟು ಮಾಡುವ ಪ್ರವೃತಿಯನ್ನು ತೊಡೆದು ಹಾಕುವುದೇ ಧರ್ಮದ ಕೆಲಸ.
ಸತ್ಯ ನೀತಿ,ನ್ಯಾಯ,ಪ್ರಾಮಾಣಿಕತೆ, ದಯೆ,ಸಹಕಾರ ,ಸಭ್ಯತೆ ಮೊದಲಾದ ಮೌಲ್ಯಗಳ ಸಮುಚ್ವಯವೇ ಧರ್ಮಗಳ ಮೂಲ.
ಧರ್ಮವನ್ನು ಮುಂದಿಟ್ಟು ಈ ಮೌಲ್ಯಗಳಿಗೆ ಚ್ಯುತಿ ಉಂಟುಮಾಡುವ ಕೆಲಸಕ್ಕೆ ಕೈ ಹಾಕುವವರು ನಿಜವಾಗಿಯೂ ಧರ್ಮ ದ್ರೋಹಿಗಳಾಗುತ್ತಾರೆ.
ಈ ನಿಟ್ಟಿನಲ್ಲಿ ಈದುಲ್ ಫಿತ್ರ್ ಆಚರಿಸುವ ಮುಸ್ಲಿಮರಿಗೆ ಬಹಳಷ್ಟು ಹೊಣೆಗಾರಿಕೆಯ ಸಂದೇಶವನ್ನು ನೀಡ ಬೇಕಾಗುತ್ತದೆ.
ಹೊಸ ವಸ್ತ್ರ ಧರಿಸಿ ತರತರದ ಭಕ್ಷ್ಯ ಬೋಜನ ಸವಿದು ಒಂದಿಷ್ಟು ರಿಲ್ಯಾಕ್ಸ್ ತೆಗೆದು ಕೊಂಡರೆ ಅದರಿಂದ ದೊಡ್ಡ ಪ್ರಯೋಜನವೇನೂ ಇಲ್ಲ.
ಮೊದಲನೆಯದಾಗಿ ರಮದಾನ್ ತಿಂಗಳ ಆರಾಧನಾ ಕರ್ಮಗಳಿಂದ ಗಳಿಸಿದ ಆತ್ಮ ಚೈತನ್ಯವನ್ನು ಕೇಡಾಗದಂತೆ ಉಳಿಸಿ ಬೆಳೆಸಿ ಕೊಳ್ಳುವ ಪ್ರತಿಜ್ಞೆಯನ್ನು ಈದುಲ್ ಫಿತ್ರ್ ದಿನ ಕೈ ಗೊಳ್ಳಬೇಕಾಗಿದೆ.
ನೆರೆಕರೆಯವರ,ಕುಟುಂಭಸ್ತರ ಜೀವನ ಮಟ್ಟವನ್ನು ಸುಧಾರಿಸುವ ಹಂಬಲವನ್ನು ಇಟ್ಟುಕೊಳ್ಳಬೇಕಾಗಿದೆ.
ಜನ ಸೇವೆಯೇ ಜನಾರ್ಧನ ಸೇವೆ ಎಂಬಂತೆ ದೇವನಿಗೆ ಹತ್ತಿರ ಆಗಲು ಅತೀ ಹೆಚ್ಚು ಉಪಯುಕ್ತ ಆಗುವ ಒಳಿತು ಅದೇನೆಂದರೆ ಮಾನವೀಯ ಸೇವೆಯಾಗಿದೆ.
ಇಂಡಿಯಾದಂತಹ ಹಲವು ಧರ್ಮ ಜಾತಿ ಪಂಗಡಗಳ ಮದ್ಯೆ ಇರುವ ಮುಸ್ಲಿಮರಿಗೆ ಅಷ್ಟೇ ಹೊಣೆಗಾರಿಕೆ ಜಾಸ್ತಿ ಇರುತ್ತೆ.
ಸ್ವ ಧರ್ಮೀಯರು ಮಾತ್ರವಲ್ಲ ಸಹ ಧರ್ಮೀಯರಿಗೆ ಕೂಡಾ ತೊಂದರೆ ಆಗುವ ರೀತಿಯಲ್ಲಿ ಯಾವತ್ತೂ ನಡೆದು ಕೊಳ್ಳಬಾರದು.
ಯುವಕರ ಆವೇಶದ ಮಾತುಗಳು ,ವರ್ತನೆಗಳು,ವಾಹನ ಸಂಚಾರಗಳು ಕೆಲವೊಮ್ಮೆ ಅನಾಹುತಕ್ಕೆ ದಾರಿಮಾಡಿಕೊಟ್ಟ ಉದಾಹರಣೆಗಳೂ ಇದೆ.
ಅದೇ ರೀತಿ ಊರಿನ ಇತರ ಧರ್ಮೀಯರಿಗೂ ಈದ್ ಖುಷಿ ಹಂಚುವ ಏರ್ಪಾಡುಗಳು ಜಮಾತ್ ಮಟ್ಟದಲ್ಲಿ ನಡೆದರೆ ಅದರಿಂದ ಈದ್ ಆಚರಣೆ ಅರ್ಥಪೂರ್ಣವಾಗುತ್ತದೆ.
ರಾಜಕೀಯ ಕಾರಣಕ್ಕಾಗಿ ಸ್ವಾರ್ಥಿಗಳಿಂದ ಉಂಟಾದ ಕೋಮು ದ್ರುವೀಕರಣ ಎಂಬ ಪೆಡಂಬೂತವನ್ನು ಹಿಮ್ಮೆಟ್ಟಿಸಲು ಹಬ್ಬ ಹರಿದಿನಗಳು ನಿಮಿತ್ತವಾಗಲಿ ಎಂಬುದೇ ನಮ್ಮ ಆಶಯ.ನಾಡಿನ ಜನತೆಗೆ ಈದುಲ್ ಫಿತ್ರ್ ಶುಭಾಷಯಗಳು.





