
ಗಳೂರು, ಏಪ್ರಿಲ್ 1: ಖಾಸಗಿ ಪ್ರೀ-ಸ್ಕೂಲ್ ನಡೆಸುತ್ತಿದ್ದ ಶಿಕ್ಷಕಿಯೊಬ್ಬಳು ಹನಿಟ್ರ್ಯಾಪ್ ನಡೆಸಿದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ. ಮಕ್ಕಳ ಪೋಷಕರನ್ನು ಟಾರ್ಗೆಟ್ ಮಾಡಿ, ಅವರೊಂದಿಗೆ ಸಂಬಂಧ ಬೆಳೆಸಿಕೊಂಡು ಹಣ ಸುಲಿಗೆ ಮಾಡುತ್ತಿದ್ದ ಈ ಶಿಕ್ಷಕಿ ಮತ್ತು ಆಕೆಯ ಗ್ಯಾಂಗ್ ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾರೆ.
2023ರಲ್ಲಿ, ಶ್ರೀದೇವಿ ರುಡಿಗಿ ಎಂಬ ಶಿಕ್ಷಕಿ ರಾಕೇಶ್ ಎಂಬ ಪೋಷಕನ ಪರಿಚಯವಾಗಿತ್ತು. ಶಾಲೆ ನಿರ್ವಹಣೆ ಮತ್ತು ತಂದೆಯ ಚಿಕಿತ್ಸೆಗೆಂದು ಶ್ರೀದೇವಿ 4 ಲಕ್ಷ ರೂ. ಸಾಲ ಪಡೆದಿದ್ದಳು. ಈ ಹಣವನ್ನು 2024ರ ಮಾರ್ಚ್ ವೇಳೆಗೆ ಹಿಂತಿರುಗಿಸುವಂತೆ ಹೇಳಿದ್ದಳು. ಆದರೆ, ರಾಕೇಶ್ ಹಣವನ್ನು ವಾಪಸ್ ಕೇಳಿದಾಗ, ತಕ್ಷಣ ನೀಡಲು ಸಾಧ್ಯವಿಲ್ಲವೆಂದು ಹೇಳಿ, ಶಾಲೆಯ ಪಾಲುದಾರನಾಗುವಂತೆ ಆಮಿಷ ಒಡ್ಡಿದಳು.
ಹಣ ನೀಡದ ಕಾರಣ, ಇಬ್ಬರ ನಡುವೆ ಸ್ನೇಹ ಹೆಚ್ಚಾಯಿತು. ಈ ಸಂಬಂಧದ ನಡುವೆಯೇ, ಶ್ರೀದೇವಿ ಹಾಗೂ ಪೋಷಕ ರಾಕೇಶ್ ಜೊತೆ ಜತೆಯಾಗಿ ಹಲವು ಕಡೆಗಳಿಗೆ ತೆರಳುತ್ತಿದ್ದಳು. ಈ ವೇಳೆ, ಶ್ರೀದೇವಿಯೊಂದಿಗೆ ಮಾತನಾಡಲು, ರಾಕೇಶ್ ಹೊಸ ಸಿಮ್ ಮತ್ತು ಮೊಬೈಲ್ ಅನ್ನು ಖರೀದಿಸಿದ್ದರು. ಆದರೆ, ಜನವರಿ ಮೊದಲ ವಾರದಲ್ಲಿ ಅವರು ಹಣವನ್ನು ಮತ್ತೆ ವಾಪಸ್ ಕೇಳಿದಾಗ, ಶ್ರೀದೇವಿ 15 ಲಕ್ಷ ರೂ. ನೀಡುವಂತೆ ಒತ್ತಾಯಿಸಿದರು. ಇದಕ್ಕೆ ರಾಕೇಶ್ ಒಪ್ಪಲಿಲ್ಲ.
ರಾಕೇಶ್ 15 ಲಕ್ಷ ರೂ. ನೀಡಲು ಒಪ್ಪದ ಕಾರಣ ಮನೆಗೆ ಭೇಟಿ ನೀಡಿ, ರಾಕೇಶ್‌ಗೆ ಶ್ರೀದೇವಿ ಮುತ್ತು ಕೊಟ್ಟಿದ್ದಳು. ಈ ಸಂದರ್ಭದ ಫೋಟೋ ಮತ್ತು ವಿಡಿಯೋ ಆಧಾರದಲ್ಲಿ ಬೆದರಿಸಿ 50 ಸಾವಿರ ರೂ. ವಸೂಲಿ ಮಾಡಿದ್ದಾಳೆ. ನಂತರವೂ ಪದೇಪದೇ ಹಣಕ್ಕೆ ಬೇಡಿಕೆ ಇಟ್ಟಿದ್ದರಿಂದ, ರಾಕೇಶ್ ಆಕೆಯ ಜೊತೆ ಸಂಪರ್ಕಕ್ಕೆ ಇಟ್ಟುಕೊಂಡಿದ್ದ ಸಿಮ್ ಕಾರ್ಡ್‌ನ್ನು ಮುರಿದು ಬಿಸಾಡಿದ್ದರು.
ಮಾರ್ಚ್ 12ರಂದು, ಶ್ರೀದೇವಿ ರಾಕೇಶ್ ಪತ್ನಿಗೆ ಕರೆ ಮಾಡಿ, ‘ನಿಮ್ಮ ಮಕ್ಕಳಿಗೆ ಟಿಸಿ ಕೊಡಿಸಬೇಕು, ನಿಮ್ಮ ಪತಿಯನ್ನು ನನ್ನ ಬಳಿ ಕಳುಹಿಸಿ’ ಎಂದು ಹೇಳಿದ್ದಳು. ಇದನ್ನು ನಂಬಿದ ರಾಕೇಶ್, ಶ್ರೀದೇವಿಯ ಪ್ರೀ-ಸ್ಕೂಲ್‌ಗೆ ತೆರಳಿದಾಗ, ಅಲ್ಲಿದ್ದ ಆರೋಪಿ ಸಾಗರ್ ಹಾಗೂ ಗಣೇಶ್ ಅವರನ್ನು ಬೆದರಿಸಿದರು.
‘ಸಾಗರ್ ಜೊತೆ ಶ್ರೀದೇವಿಗೆ ನಿಶ್ಚಿತಾರ್ಥ ಆಗಿದೆ. ಆದರೆ, ನೀನು ಆಕೆಯ ಜೊತೆ ಸಂಬಂಧ ಬೆಳೆಸಿದ್ದೆ’ ಎಂದು ಆರೋಪಿಗಳು ಬ್ಲ್ಯಾಕ್‌ಮೇಲ್ ಮಾಡಿದ್ದರು. ಬಳಿಕ, ರಾಕೇಶ್ ಅವರನ್ನು ಕಾರಿನಲ್ಲಿ ಕೂರಿಸಿ, ‘ಈ ವಿಚಾರ ಯಾರಿಗೂ ಹೇಳಬಾರದು, ಇಲ್ಲದಿದ್ದರೆ 1 ಕೋಟಿ ರೂ. ನೀಡಬೇಕು’ ಎಂದು ಬೆದರಿಸಿದರು. ಕೊನೆಗೂ, ಆರೋಪಿಗಳು 20 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು. ನಂತರ 1.90 ಲಕ್ಷ ರೂ ಪಡೆದು ಬಿಟ್ಟು ಕಳುಹಿಸಿದ್ದರು. ಆದರೆ ಉಳಿದ ಹಣ ನೀಡುವಂತೆ ಪ್ರಾಣ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.
ಈ ವಿಷಯ ತನ್ನ ಪ್ರಾಣಕ್ಕೆ ಆಪಾಯವೆಂದು ಭಾವಿಸಿ ರಾಕೇಶ್, ಸಿಸಿಬಿ ಪೊಲೀಸರಿಗೆ ದೂರು ನೀಡಿದರು. ಅವರ ದೂರಿನ ಆಧಾರದ ಮೇಲೆ, ಶ್ರೀದೇವಿ, ಸಾಗರ್, ಮತ್ತು ಅರುಣ್ ಅವರನ್ನು ಬಂಧಿಸಲಾಗಿದೆ. ಸದ್ಯ ಈ ಮೂವರನ್ನು ಹೆಚ್ಚಿನ ವಿಚಾರಣೆಗಾಗಿ ಸಿಸಿಬಿ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಈ ಮೂವರು ಆರೋಪಿಗಳೂ ವಿಜಯಪುರ ಮೂಲದವರಾಗಿದ್ದಾರೆ.






