
ನಮ್ಮ ಮೆಟ್ರೋ’ ಮೆಜೆಸ್ಟಿಕ್ ನಿಲ್ದಾಣದಲ್ಲಿ ಪ್ರೇಮಿಗಳೊಬ್ಬರು ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ವರ್ತಿಸಿದ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಘಟನೆಯಿಂದ ಬೆಂಗಳೂರಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಘನತೆ ಮತ್ತು ಶಿಸ್ತಿನ ಬಗ್ಗೆ ಪ್ರಶ್ನೆಗಳು ಮೂಡಿವೆ.
ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ನಡೆದ ಈ ಘಟನೆಯಲ್ಲಿ, ಯುವಕ-ಯುವತಿಯೊಬ್ಬರು ಸಾರ್ವಜನಿಕರ ಸಮ್ಮುಖದಲ್ಲಿ ಅನುಚಿತವಾಗಿ ವರ್ತಿಸಿದ್ದಾರೆ. ವಿಡಿಯೋದಲ್ಲಿ ಯುವಕನೊಬ್ಬ ತನ್ನ ಗೆಳತಿಯೊಂದಿಗೆ ಅಸಭ್ಯ ರೀತಿಯಲ್ಲಿ ವರ್ತಿಸುತ್ತಿರುವುದು ಕಂಡುಬಂದಿದೆ. ಈ ಜೋಡಿಯ ವರ್ತನೆಯನ್ನು ಗಮನಿಸಿದ ಪ್ರಯಾಣಿಕರು ಆಕ್ರೋಶಗೊಂಡಿದ್ದು, ಇಂತಹ ಕೃತ್ಯವು ಸಾರ್ವಜನಿಕ ಸ್ಥಳದ ಗೌರವಕ್ಕೆ ಧಕ್ಕೆ ತರುತ್ತದೆ ಎಂದು ಟೀಕಿಸಿದ್ದಾರೆ.
ಈ ಘಟನೆಯ ವಿಡಿಯೋವನ್ನು ಕೆಲವು ಪ್ರಯಾಣಿಕರು ರೆಕಾರ್ಡ್ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ‘ನಮ್ಮ ಮೆಟ್ರೋ’ ಖಾತೆಯನ್ನು ಟ್ಯಾಗ್ ಮಾಡಿ ಹಂಚಿಕೊಂಡಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ, ‘ಸಾರ್ವಜನಿಕ ಸ್ಥಳದಲ್ಲಿ ಇಂತಹ ಕೃತ್ಯ ಸ್ವೀಕಾರಾರ್ಹವಲ್ಲ’ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ. ಕೆಲವರು ಈ ಘಟನೆಯನ್ನು ದೆಹಲಿ ಮೆಟ್ರೋದಲ್ಲಿ ನಡೆಯುವ ಇಂತಹ ಘಟನೆಗಳಿಗೆ ಹೋಲಿಸಿ, ‘ಬೆಂಗಳೂರು ದೆಹಲಿಯ ಮಾರ್ಗವನ್ನು ತುಳಿಯುತ್ತಿದೆಯೇ?’ ಎಂದು ಪ್ರಶ್ನಿಸಿದ್ದಾರೆ.









