
ಬೆಂಗಳೂರಿನಲ್ಲಿ ಯುವತಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತಿರುವ ವ್ಯಕ್ತಿಯನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಸಂತೋಷ್ ಎಂದು ಗುರುತಿಸಲಾಗಿದ್ದು, ಈತನನ್ನು ಕೇರಳದ ನಡುವನ್ನೂರು ಪಟ್ಟಣದಲ್ಲಿ ಇಂದು ಬಂಧಿಸಲಾಗಿದೆ.
ಪ್ರಸ್ತುತ ಆರೋಪಿ ಸಂತೋಷ್‌ನನ್ನು ಬೆಂಗಳೂರಿಗೆ ಕರೆತರಲಾಗುತ್ತಿದೆ. ಆರೋಪಿಯನ್ನು ಪತ್ತೆಹಚ್ಚಲು ಪೊಲೀಸರು ಎರಡು ವಿಶೇಷ ತಂಡಗಳನ್ನು ರಚಿಸಿದ್ದು, ತನಿಖೆಯ ಸಮಯದಲ್ಲಿ 700 ಕ್ಕೂ ಹೆಚ್ಚು ಸಿಸಿಟಿವಿ ರೆಕಾರ್ಡಿಂಗ್‌ಗಳನ್ನು ಪರಿಶೀಲಿಸಿದ್ದರು.
ಏ. 3 ರಂದು ಬೆಳಗ್ಗಿನ ಜಾವ 2 ಗಂಟೆ ಸುಮಾರಿಗೆ ಬೆಂಗಳೂರಿನ ಬಿಟಿಎಂ ಲೇಔಟ್ ಪ್ರದೇಶದಲ್ಲಿ ಯುವತಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆರೋಪಿ ಯುವತಿಯರ ಕಡೆಗೆ ಓಡುತ್ತಿರುವುದು ದೃಶ್ಯಗಳಲ್ಲಿ ಸೆರೆಯಾಗಿದೆ. ಖಾಲಿ ರಸ್ತೆಯಲ್ಲಿ ಒಂದು ಬದಿಯಲ್ಲಿ ಕೆಲವು ದ್ವಿಚಕ್ರ ವಾಹನಗಳು ನಿಂತಿದ್ದವು. ನಂತರ ಆರೋಪಿ ಇಬ್ಬರು ಯುವತಿಯರಲ್ಲಿ ಒಬ್ಬಳನ್ನು ಹಿಂದಿನಿಂದ ತಬ್ಬಿ ಹಿಡಿದು ಅನುಚಿತವಾಗಿ ವರ್ತಿಸಿ ಬಳಿಕ ಅಲ್ಲಿಂದ ಕಾಲ್ಕಿತ್ತಿದ್ದನು.
ಎಲ್ಲಾ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾದ ನಂತರ ಘಟನೆಯ ಬಗ್ಗೆ ಸಾರ್ವಜನಿಕರು ಭಾರೀ ಆಕ್ರೋಶ ಹೊರಹಾಕಿದರು. ಬಳಿಕ ಆರೋಪಿಯ ಪತ್ತೆಗೆ ಪೊಲೀಸರು 10 ದಿನಗಳ ಕಾಲ ಶೋಧ ನಡೆಸಿದ್ದು, ಇದೀಗ ಕಾಮುಕ ಕೊನೆಗೂ ಅರೆಸ್ಟ್ ಆಗಿದ್ದಾನೆ.






