
ತಡರಾತ್ರಿ ಮನೆಯೊಂದರ ಬಾಗಿಲು ಬಡಿದು ನೀರು ಕೇಳಿ ಬಳಿಕ ಕುಸಿದು ಬಿದ್ದ ಯುವತಿ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದ್ದು, ಆಟೋ ಚಾಲಕ ಹಾಗೂ ಆತನ ಸ್ನೇಹಿತರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವುದು ಬಯಲಾಗಿದೆ.
ಪ್ರಕರಣ ಸಂಬಂಧ ರಿಕ್ಷಾ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈತ ತನ್ನ ಮೂವರು ಸ್ನೇಹಿತರ ಜೊತೆ ಸೇರಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಮುನ್ನೂರು ಗ್ರಾಮ ಮತ್ತು ಉಳ್ಳಾಲ ನಗರಸಭೆ ಗಡಿಯಲ್ಲಿರುವ ನೇತ್ರಾವತಿ ನದಿ ಸಮೀಪದ ಬೊಳ್ಳ ಹೌಸ್ ಬಳಿ ಘಟನೆ ಬುಧವಾರ ತಡರಾತ್ರಿ ನಡೆದಿದೆ.
ಉದ್ಯೋಗ ಅರಸಿ ಬಂದಿರುವ ಪಶ್ಚಿಮ ಬಂಗಾಳ ಮೂಲದ ಯುವತಿ ಕೇರಳದ ಉಪ್ಪಳ ಎಂಬಲ್ಲಿ ವಾಸವಾಗಿದ್ದಳು. ಈಕೆ ತನ್ನ ಸ್ನೇಹಿತನ ಜೊತೆಗೆ ಮಂಗಳೂರಿಗೆ ಬಂದಿದ್ದ ವೇಳೆ ಇಬ್ಬರ ನಡುವೆ ಗಲಾಟೆಯಾಗಿದೆ. ಈ ವೇಳೆ ಆಕೆ ಒಬ್ಬಳೇ ಮಧ್ಯರಾತ್ರಿ ಹೊರಗೆ ಬಂದಿದ್ದಾಳೆ. ಹೀಗೆ ಬಂದವಳೇ ಸಿಕ್ಕ ರಿಕ್ಷಾ ಚಾಲಕನ ಬಳಿ ಸಹಾಯ ಕೇಳಿದ್ದಾಳೆ. ಸಹಾಯ ಮಾಡುವ ನೆಪದಲ್ಲಿ ಕರೆದುಕೊಂಡು ಹೋಗಿ ಚಾಲಕ ಆಕೆಗೆ ಅಮಲು ಪದಾರ್ಥ ನೀಡಿ ಸ್ನೇಹಿತರ ಜೊತೆಗೆ ಸೇರಿ ಕೃತ್ಯವೆಸಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ಸದ್ಯ ಉಳ್ಳಾಲ ಠಾಣೆಯ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.









