
ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದ ಪೆರಾಡಿ ಎಂಬಲ್ಲಿ ಗುಂಪೊಂದು ಪುರುಷರ ಪೂಜೆ ಎಂಬ ಕಾರ್ಯಕ್ರಮದ ಹೆಸರಿನಲ್ಲಿ ಇಸ್ಲಾಂ ಧರ್ಮದ ಆಚಾರ ವಿಚಾರಗಳನ್ನು ಹಾಗೂ ಪ್ರವಾದಿ(ಸ.ಅ) ರವರನ್ನು ವ್ಯಂಗ್ಯವಾಗಿ ಹಾಗೂ ಅಶ್ಲೀಲವಾಗಿ ಚಿತ್ರೀಕರಿಸಿ ಕೋಮುದ್ವೇಷ ಹಬ್ಬಿಸಿದ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರು ರವರ ನೇತೃತ್ವದಲ್ಲಿ ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಲಾಯಿತು .
ಮನವಿಯಲ್ಲಿ, ದಕ್ಷಿಣ ಕನ್ನಡದಲ್ಲಿ ಕೋಮುಗಲಭೆ ನಡೆಸಿ ಅಶಾಂತಿ ಸೃಷ್ಟಿಸುವ ದುರುದ್ದೇಶದಿಂದ ಕಳೆದ ಹಲವು ದಿನಗಳಿಂದ ಕೆಲವೊಂದು ದುಷ್ಟಶಕ್ತಿಗಳು ಜಿಲ್ಲೆಯ ಹಲವು ಕಡೆಗಳಲ್ಲಿ ಮುಸ್ಲಿಮರ ಮತ್ತು ಕ್ರಿಶ್ಚಿಯನ್ ಸಮುದಾಯದ ಧಾರ್ಮಿಕ ಆಚರಣೆಗಳನ್ನು ಅವಹೇಳನ ಮಾಡಿ, ಹಿಂದೂ ಧಾರ್ಮಿಕ ಸಂಪ್ರದಾಯ ಎಂದು ಕಾರಣ ನೀಡಿ ಕೆಲವೊಂದು ಇಲ್ಲದ ಆಚರಣೆಗಳನ್ನು ತಂದು ಇದರ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುಗಲಭೆ ಸೃಷ್ಟಿಸಿ ಸಮಾಜದಲ್ಲಿ ಅಶಾಂತಿ ಉಂಟುಮಾಡುವ ಮೂಲಕ ಒಂದು ಪ್ರಕ್ಷುಬ್ಧತೆಯ ವಾತಾವರಣ ಸೃಷ್ಟಿಸಿ ಆ ಮೂಲಕ ರಾಜಕೀಯ ಲಾಭ ಪಡೆಯುವ ದುರುದ್ದೇಶವನ್ನು ಸಮಾಜಘಾತುಕ ಶಕ್ತಿಗಳು ನಡೆಸುತ್ತಿದೆ.
ದಿನಾಂಕ 12-04-2025 ರಂದು ಮೂಡುಕೊಡಿ ಗ್ರಾಮದ ನೂವಿದಗೋಳಿ ಎಂಬಲ್ಲಿ ನಂದನ್, ಬಾಸ್ಕರ ಬೋಲೂರು, ಪ್ರವೀನ ಪಡ್ಲ (ಜಿನ್ನಮ್ಮ) ಯಶವಂತ್,ಕರುನಾಕರ ನೂವಿದಗೋಳಿ , ಶಶಿ ಉತುಲ್ಲೊಟ್ಟು, ದರ್ನಪ್ಪ ನಾಯ್ಕ ಮೂಡೇಲು, ಉಮೇಶ ಬೋಲೂರು ,ಶಶಿ ಕೇಶವ ನಗರ, ವಿಜಯಾ ದೋಗುನಾಯಕ, ಮತ್ತು ಇತರ 12 ಜನ ಸೇರಿಕೊಂಡು ಎಸ್ ಡಿ ಪಿ ಐ ಪಕ್ಷದ ಅಧಿಕೃತ ಧ್ವಜವನ್ನು ಕಳ್ಳತನ ಮಾಡಿ ದುರ್ಬಳಕೆ ಮಾಡಿರುತ್ತಾರೆ ಹಾಗೂ ಮುಸ್ಲಿಮರ ಆಚಾರ, ಸಂಪ್ರದಾಯಗಳನ್ನು ವ್ಯಂಗ್ಯ ಮಾಡಿ ಮುಸ್ಲಿಮರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದು ಆ ಮೂಲಕ ಮುಸಲ್ಮಾನರ ಬಾವನೆಗಳನ್ನು ಕೆರಳಿಸಿ ಸಮಾಜದಲ್ಲಿ ಕೋಮು ಗಲಭೆ ಉಂಟುಮಾಡುವ ದುರುದ್ದೇಶದಿಂದ ಕೃತ್ಯ ನಡೆಸಿರುತ್ತಾರೆ.
ಈ ಕುರಿತು ಎಸ್ ಡಿ ಪಿ ಐ ವತಿಯಿಂದ ವೇಣೂರು ಠಾಣೆಯಲ್ಲಿ ಕೇಸು ನೀಡಿರುತ್ತೇವೆ. ಆದರೆ ಪೋಲೀಸರು ಯಾವುದೇ ರೀತಿಯ ಕಾನೂನು ಕ್ರಮವನ್ನು ಆರೋಪಿಪತರ ಮೇಲೆ ಕೈಗೊಂಡಿರುವುದಿಲ್ಲ ಮತ್ತು ಪ್ರಕರಣ ದಾಖಲಿಸಿರುವುದಿಲ್ಲ. ಪೋಲೀಸರ ಈ ರೀತಿಯ ವರ್ತನೆಯಿಂದ ನಿನ್ನೆ ದಿನಾಂಕ 16-04-2025 ರಂದು ವೇಣೂರು ಠಾಣಾ ವ್ಯಾಪ್ತಿಯ ಪೆರಾಡಿ ಗ್ರಾಮದ ರಂಜಿತ್ ಶೆಟ್ಟಿ ಪೆರಾಡಿ ಮತ್ತು ಸುಜಿತ್ ಶೆಟ್ಟಿ ಯವರ ಮನೆಯಲ್ಲಿ ಅಂತು ಸಾವ್ಯ , ದಯಾನಂದ ಪೆರಾಡಿ , ರಾಜೇಶ್ ಸಾವ್ಯ , ಹರೀಶ್ ಸಾವ್ಯ ಮತ್ತು 15 ಜನರ ಗುಂಪು ಸೇರಿಕೊಂಡು ಮತ್ತೆ ಮುಸ್ಲಿಂ ಧಾರ್ಮಿಕ ಆಚರಣೆಗಳಿಗೆ ಅವಹೇಳನ ಮಾಡಿ ಪ್ರವಾದಿಯನ್ನು ನಿಂದಿಸಿರುತ್ತಾರೆ.
ಆದ್ದರಿಂದ ಹಿಂದೂ ಸಂಪ್ರದಾಯ ಆಚರಣೆಯ ನೆಪ ಇಟ್ಟುಕೊಂಡು ಮುಸ್ಲಿಮರ ಧಾರ್ಮಿಕ ಆಚರಣೆಗಳನ್ನು ಅವಹೇಳನ ಮಾಡಿ ಜಿಲ್ಲೆಯಲ್ಲಿ ಕೋಮುಗಲಭೆಯನ್ನು ಸೃಷ್ಟಿಸುವ ದುರುದ್ದೇಶದಿಂದ ಈ ಮೇಲೆ ತಿಳಿಸಿದ ವ್ಯಕ್ತಿಗಳು ಗುಂಪುಸೇರಿ ಪಿತೂರಿ ನಡೆಸಿದ್ದಾರೆ. ಇದು ಸಮಾಜದಲ್ಲಿ ಅಶಾಂತಿಯನ್ನು ಉಂಟು ಮಾಡುವ ದುರುದ್ದೇಶದಿಂದ ಈ ರೀತಿಯ ಕೃತ್ಯವನ್ನು ನಡೆಸಿರುತ್ತಾರೆ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಆದ್ದರಿಂದ ಈ ಮೇಲಿನ ಸಮಾಜಘಾತುಕ ಆರೋಪಿತರ ಮೇಲೆ ಸೂಕ್ತ ಕಾನೂನು ಕ್ರಮವನ್ನು ಪೊಲೀಸ್ ಇಲಾಖಾ ವತಿಯಿಂದ ಜರುಗಿಸಬೇಕು, ಹಾಗೂ ಸಮಾಜದಲ್ಲಿ ಶಾಂತಿ ಸಾಮರಸ್ಯ ನೆಲೆಗೊಳ್ಳಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ನಿಯೋಗದಲ್ಲಿ ಎಸ್ ಡಿ ಪಿ ಐ ಮಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ನವಾಝ್ ಶರೀಫ್ ಕಟ್ಟೆ, ಜಿಲ್ಲಾ ಸಮಿತಿ ಸದಸ್ಯ ಹನೀಫ್ ಪೂಂಜಾಲ್ ಕಟ್ಟೆ, ಬೆಳ್ತಂಗಡಿ ಕ್ಷೇತ್ರಾಧ್ಯಕ್ಷ ಅಕ್ಬರ್ ಬೆಳ್ತಂಗಡಿ ಉಪಸ್ಥಿತರಿದ್ದರು.









