
ಭೂಗತ ಜೀವಿ ಮುತ್ತಪ್ಪ ರೈ ಮಗನ ಮೇಲೆ ಶುಕ್ರವಾರ ರಾತ್ರಿ ಗುಂಡಿನ ದಾಳಿ ನಡೆದಿದ್ದು, ರಿಕ್ಕಿ ರೈ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದೇ ವೇಳೆ ಮುತ್ತಪ್ಪ ರೈ ಎರಡನೇ ಪತ್ನಿ ಅನುರಾಧಾ ಹಾಗೂ ಸಂಗಡಿಗರ ವಿರುದ್ದ ರಿಕ್ಕಿ ರೈ ಕಾರ್ ಚಾಲಕ ಬಸವರಾಜು ದೂರು ದಾಖಲಿಸಿದ್ದು, ಪೊಲೀಸರು ಎಫ್‌ಐಆರ್ ಸಿದ್ದಪಡಿಸಿದ್ದಾರೆ.
ಬಸವರಾಜ್ ನೀಡಿರುವ ದೂರಿನ ಪೂರ್ಣ ಪಾಠ ಇಲ್ಲಿದೆ.
ದಿನಾಂಕ 19.04-2025 ರಂದು ಬೆಳಗ್ಗೆ 8.00 ಗಂಟೆಗೆ ಪಿರ್ಯಾದುದಾರರಾದ ಬಸವರಾಜು ಅವರು ಠಾಣೆಗೆ ಹಾಜರಾಗಿ ನೀಡಿದ ದೂರು ಏನೆಂದರೆ, ನಾನು ಸುಮಾರು 4-5 ವರ್ಷಗಳಿಂದ ರಿಕ್ಕಿ ರೈ ಅವರ ಬಳಿ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಹೀಗಿರುವಾಗ ಹಲವು ಭಾರಿ ರಿಕ್ಕಿ ರೈ ಅವರು ತನಗೆ ಜೀವ ಬೆದರಿಕೆ ಇರುವುದಾಗಿ ತಿಳಿಸಿದ್ದರು. ಮತ್ತು ಜಾಗರೂಕತೆಯಿಂದ ಇರುತ್ತಿದ್ದರು. ಅವರು ಬೆಂಗಳೂರಿನ ಸದಾಶಿವನಗರ ಮತ್ತು ಬಿಡದಿಯಲ್ಲಿ ವಾಸವಿರುತ್ತಿದ್ದರು. 18.04.2025 ರಂದು ಸದಾಶಿನಗರದ ರಿಕ್ಕೆ ರೈ ನಿವಾಸದಿಮದ ಸುಮಾರು ಸಂಜೆ 6.00 ಕ್ಕೆ ಮನೆಯಿಂದ ಹೊರಟು ಬಿಡದಿಯ ಮನೆಗೆ 7.30 ಕ್ಕೆ ತಲುಪಿರುತ್ತೇವೆ. ಎಂದಿನಂತೆ ನಾವು ವಿಶ್ರಾಂತಿ ಪಡೆದು ಸುಮಾರು 11..00 ಗಂಟೆಗೆ ರಾತ್ರಿ ರಿಕ್ಕಿ ರೈ ಅವರು ಬೆಂಗಳೂರಿಗೆ ಹೊರಡಬೇಕೆಂದು ಕಪ್ಪು ಬಣ್ಣದ ಫಾರ್ಚೂನರ್ (ಕೆಎ 53 ಎಂಸಿ 7128) ನಲ್ಲಿ ನಾನು ರಿಕ್ಕಿ ರೈ ಹಾಗೂ ರಾಜ್ ಪಾಲ್ ಎಂಬ ಅಂಗರಕ್ಷಕ ಮೂವರೂ ಬಿಡದಿ ಮನೆಯಿಂದ ಹೊರಟೆವು. ಘಟನೆ ನಡೆದ ಸ್ಥಳದಲ್ಲಿ ಟಪ್ ಎಂಬ ಜೋರಾದ ಶಬ್ದ ಕೇಳಿಬಂದಿದ್ದು, ಸ್ವಲ್ಪ ದೂರ ಮುಂದೆ ನಿಲ್ಲಿಸಿ ಕೆಳಗಿಳಿದು ಟೈರ್ ಪರೀಕ್ಷಿಸಿಕೊಂಡೆವು. ಎಲ್ಲಾ ಸರಿಯಿದ್ದ ಕಾರಣ ಪುನಃ ಅಲ್ಲಿಂದ ಹೊರಟು ಬಿಡದಿಯ ರೈಲ್ವೇ ಕ್ರಾಸ್ ವರೆಗೂ ಬಂದಿದ್ದು, ರಿಕ್ಕಿ ರೈ ತನ್ನ ಜೇಬಿನಲ್ಲಿದ್ದ ಪರ್ಸ್ ಅನ್ನು ಮನೆಯಲ್ಲಿಯೇ ಬಿಟ್ಟು ಬಂದಿರುವುದಾಗಿ ಸೂಚಿಸಿ ಪುನಃ ಬಿಡದಿ ಮನೆಗೆ ವಾಪಸ್ ಹೋದೆವು. ನಂತರ ಸುಮಾರು ಒಂದೂವರೆ ತಾಸಿನ ಬಳಿಕ ಅಂದರೆ ಸುಮಾರು 12.50 ಕ್ಕೆ ಬಿಡದಿ ಮನೆಯಿಂದ ಬೆಂಗಳೂರಿಗೆ ಹೊರಟಿದ್ದು, ಬಿಡದಿ ಮನೆಯ ಗೇಟ್ ದಾಟಿ ಹೊರಬರುತ್ತಿದ್ದಂತೆಯೇ ನಾವು ಮೊದಲು 11.00 ಗಂಟೆಗೆ ಹೋದಾಗ ಶಬ್ದ ಆದ ಜಾಗದಲ್ಲಿಯೇ ನಾನು ಚಲಾಯಿಸಿದ್ದ ಕಾರಿನ ಮೇಲೆ ಏಕಾವಳಿ ಗುಂಡು ಹಾರಿಸಿದ್ದು ನಾನು ಪಾರೆದೆನು. ಆದರೆ ರಿಕ್ಕಿ ರೈ ಅವರ ಮೂಗಿನ ಮೇಲ ಮತ್ತು ಬಲತೋಳಿನ ಮೇಲೆ ತೀವ್ರಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದು, ಅವರು ಗುಂಡಿನ ದಾಳಿಯಿಂದ ನರಳುತ್ತಿದ್ದು ಅತಿಯಾಗಿ ರಕ್ತ ಸ್ರಾವವಾಗುತ್ತಿತು. ನಾನು ಕೂಡಲೇ ವಾಹನವನ್ನು ನಿಲ್ಲಿಸಿ ಇಳಿದು ಬಂದು ಹಿಂದಿ ಕುಳಿತಿದ್ದ ರಿಕ್ಕಿ ರೈ ಅವರನ್ನು ನೋಡಲಾಗಿ ಮೂಗು ಒಡೆದು ಹೋಗಿ ಮುಖವೆಲ್ಲಾ ರಕ್ತಮಯವಾಗಿತ್ತು. ಕೂಡಲೇ ನಾನು ಬಿಡದಿಯಲ್ಲಿರುವ ಭರತ್ ಕೆಂಪಣ್ಣ ಆಸ್ಪತ್ರೆಗೆ ಕರೆದೊಯ್ದೆ. ವೈದ್ಯರು ಪರೀಕ್ಷಿಸಿ ರಕ್ತ ನಿಲ್ಲಿಸಿಲು ಪ್ರಯತ್ನಿಸಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಹೋಗುವಂತೆ ತಿಳಿಸಿದರು.
ನಾನು ರಿಕ್ಕಿ ರೈ ಅವರನ್ನು ಘಟನೆಗೆ ಸಂಬಂಧಿಸಿದಂತೆ ಏನಾಗಿರಬಹುದೆಂದು ಕೇಳಾಗಿ ಅವರು ಬಹಳ ನೋವಿನಿಂದ ನರಳುತ್ತಾ ರಾಕೇಶ್ ಮಲ್ಲಿ, ಅನುರಾಧ ಹಾಗೂ ನಿತೇಶ್ ಎಸ್ಟೇಟ್ ಮಾಲಿಕರಾದ ನಿತೇಶ್ ಶೆಟ್ಟಿ ಮತು ವೈದ್ಯನಾಥನ್ ಅವರ ಅನುಯಾಯಿಗಳ ಮೇಲೆ ಅನುಮಾನವಿದೆಯೆಂದು ತಿಳಿಸಿದರು. ನಮ್ಮ ತಂದೆ ಮುತ್ತಪ್ಪ ರೈ ಜೀವಿತಕಾಲದಲ್ಲಿ ಹಲವು ವಿರೋಧಿಗಳಿದ್ದು ಅವರ ಮೇಲೆ ಕೊಲೆ ಯತ್ನ ನಡೆಸಿ ವಿಫಲರಾಗಿದ್ದರು. ಹಾಗೂ ರಿಕ್ಕಿ ರೈ ತಂದೆ ಮುತ್ತಪ್ಪ ರೈ ಕ್ಯಾನ್ಸರ್ ನಿಂದ ಮೃತಪಟ್ಟಿದ್ದು, ಅವರ ಕೊನೆಯ ದಿನಗಳಲ್ಲಿಯೂ ಕೂಡ ರಾಕೇಶ್ ಮಲ್ಲಿ ಹಾಗೂ ಅನುರಾಧರವರಿಂದ ಬೆದರಿಕೆ ಬಂದಿದ್ದು ಮಾನಸಿಕ ಕಿರುಕುಳ ನೀಡಿದ್ದರು ಎಂದು ತಿಳಿಸಿದ್ದಾರೆ.
ರಿಕ್ಕಿ ರೈ ವಿವಾಹವಾಗಿದ್ದು ಹೆಂಡತಿ ಮತ್ತು ಮಗು ಹೊರದೇಶದಲ್ಲಿದ್ದಾರೆ. ಇವರು ಆಗಾಗ್ಗೆ ಹೋಗಿ ಬರುತ್ತಾರೆ. ಈ ಮೇಲೆ ತಿಳಿಸಿದಂತೆ ರಿಕ್ಕಿ ರೈ ಮೇಲೆ ಗುಂಡಿನ ದಾಳಿ ನಡೆಸಿ ಸಂಚು ಹಾಕಿ ರಾಕೇಶ್ ಮಲ್ಲಿ, ಅನುರಾಧ, ಹಾಗೂ ನಿತೀಶ್ ಎಸ್ಟೇಟ್ ಮಾಲಿಕರುಗಳ ಮೇಲೆ ಅನುಮಾನವಿದ್ದು ಮತ್ತು ಅವರ ಸಹಚರರ ಮೇಲೆ ಅನುಮಾನವಿದ್ದು ಅವರನ್ನು ಕೂಲಂಕಷವಾಗಿ ವಿಚಾರಣೆ ಮಾಡಿಕೊಳ್ಳಬೇಕೆಂದು ವಿನಂತಿಸಿಕೊಳ್ಳುತ್ತಿದ್ದೇನೆ.









