
ಪುತ್ತೂರು:ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಆಶಾಜ್ಯೋತಿ ಪುತ್ತೂರಾಯ ಅವರ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ಬಂಧಿಸದೇ ಬಿಟ್ಟಿದ್ದಾರೆ ಎಂದು ಆರೋಪಿಸಿ ಪುತ್ತೂರಿನ ಕೆಲವು ವೈದ್ಯರು, ಭಾರತೀಯ ವೈದ್ಯಕೀಯ ಸಂಘ ಪುತ್ತೂರು ಶಾಖೆ ಪದಾಧಿಕಾರಿಗಳು ಹಾಗೂ ಅರುಣ್ ಕುಮಾರ್ ಪುತ್ತಿಲ ಸಹಿತ ನೂರಾರು ಮಂದಿ ರಾತ್ರಿ ವೇಳೆಯೇ ಠಾಣೆಯ ಮುಂದೆ ಜಮಾಯಿಸಿ ಪೊಲೀಸರ ನಡೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. ಆರೋಪಿಯನ್ನು ಏ.೨೬ರ ಬೆಳಿಗ್ಗೆ ೮ ಗಂಟೆಯ ಒಳಗೆ ಬಂಧಿಸದಿದ್ದರೆ ಪುತ್ತೂರಿನಲ್ಲಿ ಎಲ್ಲಾ ವೈದ್ಯಕೀಯ ಸೇವೆ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸುವುದಾಗಿ ಭಾರತೀಯ ವೈದ್ಯಕೀಯ ಸಂಘದ ಕಾರ್ಯದರ್ಶಿ ಎಚ್ಚರಿಕೆ ನೀಡಿದರು.
ಆರೋಪಿಯನ್ನು ಬಿಟ್ಟಿರುವುದು ಖಂಡನೀಯ-ಡಾ.ಸುರೇಶ್ ಪುತ್ತೂರಾಯ
ಡಾಕ್ಟರ್ ಸ್ ಫೋರಂ ಅಧ್ಯಕ್ಷ ಡಾ.ಸುರೇಶ್ ಪುತ್ತೂರಾಯ ಮಾತನಾಡಿ, ಸರಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಆಶಾ ಪುತ್ತೂರಾಯರವರು ವಾರ್ಡ್‌ಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ಮಕ್ಕಳಿಗೆ, ಗರ್ಭಿಣಿಯರಿಗೆ ತೊಂದರೆ ಅಗುತ್ತಿದೆ ಎಂದಾಗ ಅಲ್ಲಿದ್ದ ಮಹಿಳೆ ಹಾಗೂ ಅವರ ಮಗ ಏಕಾಏಕಿ ವೈದ್ಯೆ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ.ಪೊಲೀಸರು ಆರೋಪಿಯನ್ನು ಠಾಣೆಗೆ ಕರೆತಂದು ನಂತರ ಬಿಟ್ಟಿದ್ದಾರೆ. ಇದಕ್ಕೆ ಆರೋಪಿಯ ಜೊತೆ ಮಗು ಇದೆ ಕಾರಣ ನೀಡಿರುವುದು ಖಂಡನೀಯ.ಹಲ್ಲೆ ನಡೆಸಿದ ಆರೋಪಿಯನ್ನು ಬಂಧಿಸಿ ಕಾನೂನು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮಾತಿನ ಚಕಮಕಿ: ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ
ಡಾ.ಆಶಾಜ್ಯೋತಿ ಅವರೊಂದಿಗೆ ಅನುಚಿತವಾಗಿ ವರ್ತಿಸಿ,ಹಲ್ಲೆಗೆ ಯತ್ನಿಸಿದ್ದ ಕುರಿತು ಪೊಲೀಸರು ಸುಳ್ಯಪದವಿನ ಜೊಹರಾ ಮತ್ತವರ ಮಗನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡರೂ ಬಂಧಿಸದೇ ಬಿಟ್ಟಿದ್ದಾರೆ ಎಂದು ಆರೋಪಿಸಿ ಭಾರತೀಯ ವೈದ್ಯಕೀಯ ಸಂಘದ ಪುತ್ತೂರು ಶಾಖೆಯ ಪದಾಧಿಕಾರಿಗಳು, ವೈದ್ಯರು ಹಾಗೂ ಅರುಣ್ ಕುಮಾರ್ ಪುತ್ತಿಲ ನೇತೃತ್ವದಲ್ಲಿ ನೂರಾರು ಮಂದಿ ಪೊಲೀಸ್ ಠಾಣೆ ಮುಂದೆ ಜಮಾಯಿಸಿದ್ದರು.ಆರೋಪಿಯನ್ನು ಬಿಟ್ಟಿರುವ ವಿಚಾರದಲ್ಲಿ ಪೊಲೀಸರು ಹಾಗೂ ಅಲ್ಲಿ ನೆರದವರ ಮಧ್ಯೆ ಮಾತಿನ ಚಕಮಕಿಯೂ ನಡೆಯಿತು. ಪ್ರತಿಭಟನಾಕಾರರ ಬೇಡಿಕೆ ಬಗ್ಗೆ ಪೊಲೀಸರಿಂದ ಪೂರಕ ಸ್ಪಂದನೆ ದೊರೆಯದಿದ್ದಾಗ, ನಾವು ಇಲ್ಲೇ ಕುಳಿತುಕೊಳ್ಳುತ್ತೇವೆ ಎಂದು ಹೇಳಿ ಠಾಣೆಯೆದುರು ಕುಳಿತು ಪೊಲೀಸರ ನಡೆಯ ಬಗ್ಗೆ ಆಕ್ರೋಶ ವ್ಯಕಪಡಿಸಿದ ಪ್ರತಿಭಟನಾಕಾರರು ಪೊಲೀಸರ ವಿರುದ್ಧ ದಿಕ್ಕಾರ ಕೂಗಿದರು.ಆರೋಪಿಯನ್ನು ವಶಕ್ಕೆ ಪಡೆದರೂ ಬಂಧಿಸದೇ ಬಿಟ್ಟಿರುವುದು ತಪ್ಪು ಎಂದು ಪ್ರತಿಭಟನಾಕಾರರು ತಿಳಿಸಿದರು.ನಾವೇ ತೆರಳಿ ಆರೋಪಿಯನ್ನು ಬಂಧಿಸುವುದಾಗಿ ಎಸ್‌ಐ ಆಂಜನೇಯ ರೆಡ್ಡಿ ತಿಳಿಸಿದಾಗ, ನೀವು ಪೊಲೀಸ್ ಬಂದೋಬಸ್ತಿನಲ್ಲಿ ಆರೋಪಿಯನ್ನು ಕರೆ ತನ್ನಿ, ಅಲ್ಲಿಯ ತನಕ ನಾವು ಇಲ್ಲೇ ಕುಳಿತುಕೊಳ್ಳುವುದಾಗಿ ಪ್ರತಿಭಟನಾಕಾರರು ತಿಳಿಸಿದರು.






