
ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಖಾಸಗಿ ಬಸ್ ಏಕಾಏಕಿ ಹೊತ್ತಿ ಉರಿದ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಕದಬಹಳ್ಳಿ ಬಳಿ ನಡೆದಿದೆ. ಬಸ್ ಚಾಲಕನ ಸಮಯ ಪ್ರಜ್ಞೆಯಿಂದ 25ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಖಾಸಗಿ ಬಸ್ನಲ್ಲಿ ಬೆಳಗಿನ ಜಾವ 5 ಗಂಟೆ ಸುಮಾರಿಗೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ನೋಡ ನೋಡುತ್ತಿದ್ದಂತೆ ಬೆಂಕಿ ವ್ಯಾಪಿಸಲು ಆರಂಭವಾಗಿದ್ದು, ಕೂಡಲೇ ಬಸ್‌ನ ಚಾಲಕ ಹಾಗೂ ನಿರ್ವಾಹಕ ಪ್ರಯಾಣಿಕರ ಪ್ರಾಣ ಉಳಿಸುವಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.
ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಬಸ್‌ಅನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿದ ಚಾಲಕ ಕೂಡಲೇ ನಿರ್ವಾಹಕರ ಗಮನಕ್ಕೆ ತಂದು ಪ್ರಯಾಣಿಕರಿಗೆ ವಿಷಯ ಮುಟ್ಟಿಸಿದ್ದಾರೆ. ಯಾರೂ ಗಾಬರಿಯಾಗದಂತೆ ಸಮಯ ನಿರ್ವಹಿಸಿದ ಚಾಲಕ ಹಾಗೂ ನಿರ್ವಾಹಕ ಬೆಂಕಿ ಸಂಪೂರ್ಣ ಬಸ್ ವ್ಯಾಪಿಸುವ ಮೊದಲು ಎಲ್ಲಾ ಪ್ರಯಾಣಿಕರನ್ನು ಬಸ್‌ನಿಂದ ಕೆಳಗೆ ಇಳಿಸಿ ದೂರ ಕರೆದುಕೊಂಡು ಹೋಗಿದ್ದಾರೆ.
ನೋಡ ನೋಡುತ್ತಿದ್ದಂತೆ ಬೆಂಕಿ ಸಂಪೂರ್ಣ ಬಸ್ ವ್ಯಾಪಿಸಿ ಹೊತ್ತಿ ಉರಿದು ಸ್ಥಳದಲ್ಲೇ ಸುಟ್ಟು ಕರಕಲಾಗಿದೆ. ಬೆಂಕಿಯ ಜ್ವಾಲೆ ಅತಿಯಾಗಿದ್ದ ಕಾರಣ ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಸ್ವಲ್ಪ ಸಮಯದವರೆಗೆ ದಟ್ಟ ಹೊಗೆ ತುಂಬಿಕೊಂಡಿತ್ತು.
ಬಸ್ ಹೊತ್ತಿ ಉರಿಯುತ್ತಿರುವ ವಿಚಾರ ತಿಳಿಯುತ್ತಿದ್ದಂತೆ ನಾಗಮಂಗಲ ಅಗ್ನಿಶಾಮಕ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ದೌಡಾಯಿಸಿ ಬೆಂಕಿ ಆರಿಸಿದ್ದಾರೆ. ಆದರೆ ಅಷ್ಟರಲ್ಲೇ ಸಂಪೂರ್ಣ ಬಸ್ ಹೊತ್ತಿ ಉರಿದು ಭಸ್ಮವಾಗಿದೆ. ಇನ್ನು ಚಾಲಕನ ಸಮಯ ಪ್ರಜ್ಞೆಯಿಂದ 25ಕ್ಕೂ ಹೆಚ್ಚು ಪ್ರಯಾಣಿಕರ ಜೀವ ಉಳಿದಿದ್ದು, ಚಾಲಕ ಹಾಗೂ ನಿರ್ವಾಹಕರಿಗೆ ಪ್ರಯಾಣಿಕರು ಧನ್ಯವಾದ ತಿಳಿಸಿದ್ದಾರೆ. ಬಳಿಕ ಬದಲಿ ವ್ಯವಸ್ಥೆಯಿಂದ ತಾವು ತೆರಳಬೇಕಾದ ಸ್ಥಳಕ್ಕೆ ಪ್ರಯಾಣ ಬೆಳೆಸಿದ್ದಾರೆ. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬಿಂಡಿಗನವಿಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.






