ಬೆಳ್ತಂಗಡಿ: ತೆಕ್ಕಾರಿನ ಶ್ರೀ ಗೋಪಾಲಕೃಷ್ಣ ದೇಗುಲದ ಬ್ರಹ್ಮಕಲಶ ಕಾರ್ಯಕ್ರಮದಲ್ಲಿ ಬ್ಯಾರಿ ಜನಾಂಗದ ಕುರಿತು ಅವಹೇಳನ‌ ಮಾಡಿರುವ ಆರೋಪದಲ್ಲಿ ಬೆಳ್ತಂಗಡಿ ಕ್ಷೇತ್ರದ ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಾಸಕ ಹರೀಶ್ ಪೂಂಜಾ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ
ತೆಕ್ಕಾರು ನಿವಾಸಿ ಇಬ್ರಾಹಿಂ ಎಸ್.ಬಿ ಎಂಬವರು ದೂರು ನೀಡಿದ್ದು, ಭಾರತೀಯ ನ್ಯಾಯ ಸಂಹಿತೆ ಕಾಯ್ದೆಯ ಕಲಂ 196 (ಎರಡು ಗುಂಪುಗಳ ನಡುವೆ ಶತೃತ್ವ ಉಂಟು ಮಾಡುವುದು, ಧರ್ಮ, ಜನಾಂಗ, ಭಾಷೆ ಹೆಸರಲ್ಲಿ ಎರಡು ವರ್ಗಗಳ ನಡುವೆ ದ್ವೇಷ ಹಚ್ಚುವುದು, ಸೌಹಾರ್ದತೆಗೆ ಧಕ್ಕೆ ತರುವುದು, ನಿರ್ದಿಷ್ಟ ಗುಂಪಿನ ವಿರುದ್ಧ ಹಿಂಸೆಗೆ ಪ್ರಚೋದಿಸುವುದು, ಭಯ ಸೃಷ್ಟಿಸುವುದು) ಮತ್ತು
353(2) (ಧರ್ಮ‌, ಜನಾಂಗ, ಭಾಷೆ ಪ್ರದೇಶ ಜಾತಿ ಸಮುದಾಯಗಳ ನಡುವೆ ಶತೃತ್ವ ದ್ವೇಷ ಮೂಡಿಸುವ ದುರುದ್ದೇಶದಿಂದ ಸುಳ್ಳು ಮಾಹಿತಿ, ವದಂತಿ ಹರಡುವುದು) ಇದರ ಅಡಿ ಪ್ರಕರಣ ದಾಖಲು ಮಾಡಲಾಗಿದೆ.

ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಶನಿವಾರ ರಾತ್ರಿ ನಡೆದಿದೆ. ಇದರಲ್ಲಿ ಭಾಗವಹಿಸಿ ಮಾತನಾಡಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, “ತೆಕ್ಕಾರಿನ ಕಂಟ್ರಿ ಬ್ಯಾರಿಗಳು ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಹಾಕಿದ ಟ್ಯೂಬ್ ಲೈಟನ್ನು ಹೊಡೆದು ಹಾಕುತ್ತಾರೆ, ಡೀಸೆಲ್ ಕದಿಯುತ್ತಿದ್ದಾರೆ” ಎಂದು ಊರಿನ ಮುಸ್ಲಿಮರ ವಿರುದ್ದ ಅವಹೇಳನಕಾರಿ ಮತ್ತು ಕೋಮು ಪ್ರಚೋದನಕಾರಿಯಾಗಿ ಮಾತನಾಡಿದ್ದರು.

ತೆಕ್ಕಾರಿನವರು ದೇವಸ್ಥಾನದ ಕಾರ್ಯಕ್ರಮದ ಆಮಂತ್ರಣವನ್ನು ಮುಸ್ಲಿಮರ ಮಸೀದಿಗಳಿಗೆ ಕೊಟ್ಟದ್ದು ಯಾಕೆ ? ಅವರಿಗೂ ನಮಗೂ ಯಾವುದೇ ಸಂಬಂಧವಿಲ್ಲ. ನೀವು ಆಮಂತ್ರಣ ಕೊಟ್ಟದ್ದರಿಂದಲೇ ಇದೀಗ ಅವರ ಟ್ಯೂಬ್ ಲೈಟ್ ಒಡೆದಿದ್ದಾರೆ” ಎಂದು ಹರೀಶ್ ಪೂಂಜಾ ಆರೋಪಿಸಿದ್ದರು.

Leave a Reply

Your email address will not be published. Required fields are marked *

Join WhatsApp Group
error: Content is protected !!