ಬೆಟ್ಟಿಂಗ್ ಹಾಗೂ ಜೂಜಿನ ಉದ್ದೇಶ ಇಲ್ಲದೆ, ಮನರಂಜನೆ ಮತ್ತು ವಿನೋದಕ್ಕಾಗಿ ಇಸ್ಪೀಟು ಆಡುವುದು ನೈತಿಕ ಅಧಃಪತನ ಅಲ್ಲ ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿದೆ.

ಕರ್ನಾಟಕದ ‘ಸರ್ಕಾರಿ ಪಾಸಲನ್ ಕಾರ್ಖಾನೆ ನೌಕರರ ಗೃಹನಿರ್ಮಾಣ ಸಹಕಾರ ಸಂಘ’ದ ಆಡಳಿತ ಮಂಡಳಿಗೆ ಚುನಾಯಿತರಾಗಿದ್ದ ಹನುಮಂತರಾಯಪ್ಪ ವೈ.ಸಿ.ಎನ್ನುವವರ ಆಯ್ಕೆಯನ್ನು ಕೋರ್ಟ್‌ ಮರುಸ್ಥಾಪಿಸಿದೆ. ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಎನ್. ಕೋಟೀಶ್ವರ ಸಿಂಗ್ ಅವರು ಇರುವ ವಿಭಾಗೀಯ ಪೀಠವು ಈ ತೀರ್ಮಾನ ಪ್ರಕಟಿಸಿದೆ.

ರಸ್ತೆಯ ಬದಿಯಲ್ಲಿ ಕೆಲವರ ಜೊತೆಯಾಗಿ ಇಸ್ಪೀಟು ಆಡುತ್ತಿದ್ದ ಹನುಮಂತರಾಯಪ್ಪ ಅವರಿಗೆ ಯಾವುದೇ ವಿಚಾರಣೆ ನಡೆಸದೆ ₹200 ದಂಡ ವಿಧಿಸಲಾಗಿತ್ತು.

ಹನುಮಂತರಾಯಪ್ಪ ಅವರು ಜೂಜಾಡುವ ಅಭ್ಯಾಸ ಬೆಳೆಸಿಕೊಂಡ ವ್ಯಕ್ತಿ ಅಲ್ಲ ಎಂದು ಪೀಠವು ಹೇಳಿದೆ. ‘ಇಸ್ಪೀಟು ಆಟದಲ್ಲಿ ಹಲವು ಬಗೆಗಳಿವೆ. ಆದರೆ, ಅಂತಹ ಪ್ರತಿಯೊಂದು ಬಗೆಯೂ, ಅದರಲ್ಲೂ ಮುಖ್ಯವಾಗಿ ಮನರಂಜನೆಗಾಗಿ ಹಾಗೂ ವಿನೋದಕ್ಕಾಗಿ ಆಡುವುದು, ನೈತಿಕವಾದ ಅಧಃಪತನಕ್ಕೆ ಒಯ್ಯುವಂಥದ್ದು ಎಂಬುದನ್ನು ಒಪ್ಪಿಕೊಳ್ಳುವುದು ಕಷ್ಟ. ವಾಸ್ತವದಲ್ಲಿ, ನಮ್ಮ ದೇಶದ ಹಲವು ಕಡೆಗಳಲ್ಲಿ ಜೂಜು ಅಥವಾ ಬೆಟ್ಟಿಂಗ್‌ನ ಲವಲೇಶವೂ ಇಲ್ಲದೆ ಇಸ್ಪೀಟು ಆಡುವುದು ಬಡವರ ಮನರಂಜನಾ ಮಾರ್ಗ ಎಂದು ಒಪ್ಪಿತವಾಗಿದೆ’ ಎಂದು ಹೇಳಿದೆ.

ಹನುಮಂತರಾಯಪ್ಪ ಅವರು ಅತಿಹೆಚ್ಚು ಮತಗಳನ್ನು ಪಡೆದು ಆಯ್ಕೆಯಾಗಿದ್ದರು, ಅವರ ಆಯ್ಕೆಯನ್ನು ರದ್ದುಪಡಿಸಿರುವುದು ಅವರು ಮಾಡಿದ್ದಾರೆ ಎನ್ನಲಾದ ತಪ್ಪಿಗೆ ಹೋಲಿಸಿದರೆ ಬಹಳ ಹೆಚ್ಚಿನ ಶಿಕ್ಷೆ ಎಂದು ಕೋರ್ಟ್ ಹೇಳಿದೆ.

ಹನುಮಂತರಾಯಪ್ಪ ಅವರು ಜೂಜಿನ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದರು ಎಂದು ಚುನಾವಣೆಯಲ್ಲಿ ಹನುಮಂತರಾಯಪ್ಪ ವಿರುದ್ಧ ಸೋತಿದ್ದ ರಂಗನಾಥ ಬಿ. ಎನ್ನುವವರು ಸಹಕಾರ ಸಂಘಗಳ ಜಂಟಿ ನಿಬಂಧಕರಲ್ಲಿ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು.

ನೈತಿಕ ಅಧಃಪತನದ ತಪ್ಪಿನಲ್ಲಿ ಹನುಮಂತರಾಯಪ್ಪ ಭಾಗಿಯಾಗಿದ್ದಾರೆ ಎಂಬ ಕಾರಣ ನೀಡಿ ಹನುಮಂತರಾಯಪ್ಪ ಅವರ ಆಯ್ಕೆಯನ್ನು ರದ್ದುಪಡಿಸಲಾಗಿತ್ತು. ಆಯ್ಕೆ ರದ್ದುಪಡಿಸಿದ ಕ್ರಮವನ್ನು ಹೈಕೋರ್ಟ್‌ ಎತ್ತಿಹಿಡಿದಿತ್ತು. ಇದನ್ನು ಪ್ರಶ್ನಿಸಿ ಹನುಮಂತರಾಯಪ್ಪ ಅವರು ಸುಪ್ರೀಂ ಕೋರ್ಟ್‌ ಮೊರೆಹೋಗಿದ್ದರು.

Leave a Reply

Your email address will not be published. Required fields are marked *

Join WhatsApp Group
error: Content is protected !!