
ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ತಡೆ ಇಲ್ಲದ ರಾಜಕಾಲುವೆಗೆ ಬಿದ್ದು ಫೋಟೋಗ್ರಾಫರ್ ಸಾವನ್ನಪ್ಪಿದ ಘಟನೆ ಕೋಡಿಕಲ್ ಕ್ರಾಸ್ ಬಳಿ ನಡೆದಿದೆ. ಕಾಸರಗೋಡಿನ ಬಂದ್ಯೋಡು ಬಜೆ ನಿವಾಸಿ ಸೂರ್ಯನಾರಾಯಣ ಮಯ್ಯ (51) ಮೃತಪಟ್ಟವರು.
ಸೂರ್ಯನಾರಾಯಣ ಅವರು ಪಣಂಬೂರಿನಲ್ಲಿ ನಡೆಯಲಿದ್ದ ಕಾರ್ಯಕ್ರಮದ ಫೋಟೋಗ್ರಫಿಗೆಂದು ಬಂದ್ಯೋಡಿನಿಂದ ಬುಧವಾರ ಬೆಳಗ್ಗೆ ಕಾರಿನಲ್ಲಿ ಹೊರಟಿದ್ದರು.
ಸುಮಾರು 6.15ರ ವೇಳೆಗೆ ಕೋಡಿಕಲ್ ಕ್ರಾಸ್ ಬಳಿ ಕಾರು ನಿಯಂತ್ರಣ ಕಳೆದುಕೊಂಡು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ತಡೆ ಇಲ್ಲದ ನೀರು ತುಂಬಿದ ರಾಜಕಾಲುವೆಗೆ ಬಿದ್ದಿತು. ಕಾರನ್ನು ಚಲಾಯಿಸುತ್ತಿದ್ದ ಸೂರ್ಯನಾರಾಯಣ ಅವರು ಕಾರಿನಡಿ ಸಿಲುಕಿ ಮೃತಪಟ್ಟಿರುವ ಶಂಕೆ ಇದೆ. ಸಂಚಾರ ಉತ್ತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೂರ್ಯನಾರಾಯಣ ಅವರು ಈ ಹಿಂದೆ ಉಡುಪಿಯಲ್ಲೂ ಛಾಯಾಚಿತ್ರಗ್ರಾಹಕರಾಗಿದ್ದರು.
ರಿಕ್ಷಾ ಬಿದ್ದು ಚಾಲಕ ಸಾವನ್ನಪ್ಪಿದ್ದರು
ಈ ಹಿಂದೆಯೂ ರಾಜಕಾಲುವೆಗೆ ಹಲವು ವಾಹನಗಳು ಬಿದ್ದಿದ್ದು, ಕೆಲವು ಪ್ರಕರಣಗಳಲ್ಲಿ ಯಾವುದೇ ಸಾವುನೋವು ಸಂಭವಿಸಿರಲಿಲ್ಲ. 2024ರ ಮೇ 25ರಂದು ಕೊಟ್ಟಾರಚೌಕಿ ಬಳಿ ಭಾರೀ ಮಳೆಯ ಸಂದರ್ಭದಲ್ಲಿ ತಡೆಗೋಡೆ ಇಲ್ಲದ ರಾಜಕಾಲುವೆಗೆ ರಿಕ್ಷಾ ಬಿದ್ದು ಚಾಲಕ ದೀಪಕ್ ಆಚಾರ್ಯ ಮೃತಪಟ್ಟಿದ್ದರು.






