ಬಂಟ್ವಾಳ: ಧಾರ್ಮಿಕ ಕಾರ್ಯಕ್ರಮ ಮುಗಿಸಿ ಬೈಕಿನಲ್ಲಿ ಹಿಂತಿರುಗುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಕಲ್ಲು ತೂರಾಟ ನಡೆಸಿ ಹಲ್ಲೆಗೆ ಯತ್ನಿಸಿದ ಘಟನೆ ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಕೊಳತ್ತಮಜಲು ಎಂಬಲ್ಲಿ ನಡೆದಿದ್ದು, ಈ ಬಗ್ಗೆ 5 ತಿಂಗಳು ತಡವಾಗಿ ದೂರು ದಾಖಲಾಗಿದೆ.

ಘಟನೆಯ ವಿವರ:
5 ತಿಂಗಳ ಹಿಂದೆ ಅಂದರೆ (ದಿನಾಂಕ 29.12.2024 ) ರಂದು ಮಧ್ಯಾಹ್ನ, ಉಪ್ಪಿನಂಗಡಿಯ ನಿವಾಸಿ ಸಿನಾನ್ ಪೈಝಿ ಎಂಬವರು ಬಡಗಬೆಳ್ಳೂರು ಗ್ರಾಮದ ಕೊಳತ್ತಮಜಲು ಎಂಬಲ್ಲಿ ಧಾರ್ಮಿಕ ಆಚರಣೆಯನ್ನು ಮುಗಿಸಿ ತಮ್ಮ ಬೈಕಿನಲ್ಲಿ ಉಪ್ಪಿನಂಗಡಿಯತ್ತ ತೆರಳುತ್ತಿದ್ದರು. ಈ ಸಂದರ್ಭದಲ್ಲಿ, ಆರೋಪಿ ತೇಜಾಕ್ಷ ಎಂಬಾತನು, ಸಿನಾನ್ ಪೈಝಿ ಅವರ ತಲೆಗೆ ಕಲ್ಲಿನಿಂದ ಹೊಡೆದರೆ ಪ್ರಾಣಾಪಾಯ ಸಂಭವಿಸಬಹುದೆಂದು ತಿಳಿದಿದ್ದರೂ, ಏಕಾಏಕಿ ಹಿಂದಿನಿಂದ ಕಲ್ಲೊಂದನ್ನು ಬಲವಾಗಿ ಎಸೆದು ಹಲ್ಲೆಗೆ ಯತ್ನಿಸಿದ್ದಾನೆ. ಅದೃಷ್ಟವಶಾತ್, ಸಿನಾನ್‌ ಪೈಝಿ ಅವರು ತಕ್ಷಣವೇ ತಪ್ಪಿಸಿಕೊಂಡಿದ್ದರಿಂದ ಯಾವುದೇ ಅಪಾಯ ಸಂಭವಿಸಲಿಲ್ಲ.

ತಡವಾಗಿ ದೂರು ದಾಖಲು:

ಘಟನೆಯಿಂದ ಭಯಭೀತರಾಗಿದ್ದ ಸಿನಾನ್ ಪೈಝಿ ಮತ್ತು ಅವರೊಂದಿಗಿದ್ದ ಬಡಗಬೆಳ್ಳೂರು ಗ್ರಾಮದ ನಿವಾಸಿ ಶಮೀ‌ರ್ (31) ಅವರು ತಕ್ಷಣಕ್ಕೆ ದೂರು ನೀಡಿರಲಿಲ್ಲ. ಇದೀಗ, ದಿನಾಂಕ 31.05.2025 ರಂದು ಶಮೀರ್ ಅವರು ಈ ಘಟನೆ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದೂರು ದಾಖಲು

ಶಮೀ‌ರ್ ನೀಡಿದ ದೂರಿನ ಅನ್ವಯ, ಬಂಟ್ವಾಳ ಗ್ರಾಮಾಂತರ ಪೊಲೀಸರು ಆರೋಪಿ ತೇಜಾಕ್ಷನ ವಿರುದ್ಧ (ಅಪರಾಧ ಕ್ರಮಾಂಕ: 58/2025) ಭಾರತೀಯ ನ್ಯಾಯ ಸಂಹಿತೆಯ (BNS) ಕಲಂ 110 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರು ಈ ಬಗ್ಗೆ ತನಿಖೆ ಕೈಗೊಂಡಿದ್ದು, ಮುಂದಿನ ಕಾನೂನು ಕ್ರಮಗಳನ್ನು ಜರುಗಿಸಲಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!