
ಬೆಂಗಳೂರಿನಲ್ಲಿ ಉತ್ತರ ಭಾರತದ ಮಹಿಳೆಯೊಬ್ಬರು ಆಟೋ ಚಾಲಕನಿಗೆ ಚಪ್ಪಲಿಯಿಂದ ಹೊಡೆದ ಘಟನೆ ಮೇ 31ರಂದು ನಡೆದಿತ್ತು.
ಮಹಿಳೆ ಆಟೋ ತನ್ನ ವಾಹನಕ್ಕೆ ಡಿಕ್ಕಿ ಎಂದು ಆರೋಪಿಸಿದ್ದರು. ಆದರೆ ಆಟೋ ಚಾಲಕ ಸಿಸಿಟಿವಿ ಕ್ಯಾಮೆರಾಗಳಲ್ಲಿ ಪರಿಶೀಲಿಸಿ ತನ್ನ ತಪ್ಪಿಲ್ಲ ಎಂದು ವಾದಿಸಿದ್ದರು.
ವೇಳೆ ಇಬ್ಬರಿಗೂ ಮಾತಿಗೆ ಮಾತು ಬೆಳೆದು ಕಿತ್ತಾಟ ಉಂಟಾಗಿತ್ತು. ಈ ಸಮಯದಲ್ಲಿ ಆಟೊ ಚಾಲಕ ವಿಡಿಯೊ ಮಾಡಿಕೊಳ್ಳಲು ಮುಂದಾಗಿದ್ದು, ಇದರಿಂದ ಕುಪಿತಗೊಂಡ ಮಹಿಳೆ ಆಟೊ ಚಾಲಕನಿಗೆ ಚಪ್ಪಲಿ ತೆಗೆದುಕೊಂಡು ಸತತವಾಗಿ ಬಾರಿಸಿದ್ದಳು.
ಮಹಿಳೆ ಆಟೊ ಚಾಲಕನಿಗೆ ಚಪ್ಪಲಿಯಿಂದ ಬಾರಿಸುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಮತ್ತೊಮ್ಮೆ ಉತ್ತರ ಭಾರತೀಯರ ದರ್ಪ ಎಂಬ ಆಕ್ರೋಶ ಕೇಳಿಬಂದಿತ್ತು.
ಈ ಘಟನೆಯನ್ನು ಖಂಡಿಸಿದ ಕನ್ನಡ ಪರ ಹೋರಾಟಗಾರರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹಂಚಿಕೊಳ್ಳುವ ಮೂಲಕ ಕಿಡಿಕಾರಿದ್ದರು. ಈ ಸಂಬಂಧ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ದೂರನ್ನು ಸಹ ದಾಖಲಿಸಿದ್ದರು.
ಇದೀಗ ಈ ಕುರಿತು ಮತ್ತೊಂದು ಸುದ್ದಿಯೊಂದು ಹೊರಬಿದ್ದಿದ್ದು, ಆಟೊ ಚಾಲಕನಿಗೆ ಚಪ್ಪಲಿಯಲ್ಲಿ ಹೊಡೆದಿದ್ದ ಮಹಿಳೆ ಆಟೊ ಚಾಲಕನ ಕಾಲಿಗೆ ನಮಸ್ಕರಿಸಿ ಕ್ಷಮೆಯಾಚಿಸಿದ್ದಾರೆ. ಕನ್ನಡಪರ ಸಂಘಟನೆಗಳ ಸಮ್ಮುಖದಲ್ಲಿ ತಾನು ಮಾಡಿದ್ದು ತಪ್ಪು ಎಂದು ಮಹಿಳೆ ಕ್ಷಮಾಪಣೆ ಕೋರಿದ್ದಾರೆ. ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.






