
ರಾಜ್ಯ ಬಿಜೆಪಿಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಕಾರಣವನ್ನು ನೀಡಿ ಈಗಾಗಲೇ ಹಲವಾರು ಶಾಸಕರನ್ನು ಉಚ್ಚಾಟನೆ ಮಾಡುವ ಮೂಲಕ ಆಂತರಿಕ ಕಿತ್ತಾಟ ಇರುವುದನ್ನು ಬಿಜೆಪಿ (bjp) ಹೈಕಮಾಂಡ್ ಒಪ್ಪಿಕೊಂಡಿದೆ.
ಹೀಗೆ ಹಲವು ಶಾಸಕರನ್ನು ಉಚ್ಚಾಟನೆ ಮಾಡಿದ ಬಳಿಕವೂ ಸಹ ರಾಜ್ಯ ಬಿಜೆಪಿಯಲ್ಲಿ ಅಪಸ್ವರಗಳು ಕೇಳಿ ಬರುತ್ತಲೇ ಇವೆ.
ಇದನ್ನು ಬಿಜೆಪಿ ನಾಯಕರು ತಿರಸ್ಕರಿಸಿದ್ದು ರಾಜ್ಯ ಬಿಜೆಪಿಯಲ್ಲಿ ಯಾವುದೇ ಆಂತರಕ ಕಲಹಗಳಿಲ್ಲ, ಎಲ್ಲವೂ ಸರಿಯಿದೆ ಎಂದು ಹೇಳಿಕೆಗಳನ್ನು ನೀಡಿದ್ದಾರೆ.
ಆದರೆ ಬಿಜೆಪಿ ಹಿರಿಯ ನಾಯಕ ಸದಾನಂದ ಗೌಡ ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡಂತಿದೆ ಎಂದು ಬಹಿರಂಗವಾಗಿ ಹೇಳುವ ಮೂಲಕ ಬಿಜೆಪಿ ಆಂತರಿಕ ಕಲಹ ಸತ್ಯ ಎಂದಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಕುರಿತು ಮಾತನಾಡಿದ ಸದಾನಂದ ಗೌಡ ಏನು ಮಾತನಾಡಿದರೂ ನಮ್ಮಲ್ಲೇ ಪ್ರಮುಖರು ತಪ್ಪು ಕಲ್ಪನೆಯಲ್ಲೀ ನೋಡುತ್ತಾರೆ. ನಾಯಕರ ಸುತ್ತ ಚಕ್ರವ್ಯೂಹವಿದೆ, ಏನೇ ಹೇಳಿದರೂ ಅದು ಬೇರೆ ರೀತಿಯಲ್ಲೇ ಅರ್ಥವಾಗುತ್ತೆ. ನಮ್ಮ ನಾಯಕರು ಎಲ್ಲವೂ ಸರಿಯಿದೆ ಎನ್ನುತ್ತಾರೆ. ಆದರೆ ನಾನು ನೂರಕ್ಕೆ ನೂರು ಭಾಗ ಹೇಳುತ್ತೇನೆ, ಕರ್ನಾಟಕ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ, ಆಂತರಿಕ ಕಲಹವಿದೆ, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡಂತಿದೆ ಎಂದು ಹೇಳಿದರು.
ಅಲ್ಲದೇ ಇದರಿಂದ ನಾವು ಹೊರಬರಬೇಕಿದೆ. ಇದರಿಂದ ಹೊರಬಂದ 15 ದಿನಗಳಲ್ಲೇ ಕಾಂಗ್ರೆಸ್ ಅನ್ನು ಸದೆ ಬಡಿಯುವ ಶಕ್ತಿ ಬಿಜೆಪಿಗೆ ಬರುತ್ತದೆ. ಇದನ್ನು ಮಾಡಿ ಎಂದು ನಾನು ಕೇಂದ್ರದಲ್ಲಿ ಆಗ್ರಹ ಮಾಡಿಕೊಳ್ಳುತ್ತೇನೆ ಎಂದರು.






