ಪೈಪ್‌ ಲೈನ್‌ ಕೊರೆದು ಪೆಟ್ರೋಲ್‌ ಕಳ್ಳತನಕ್ಕೆ ಯತ್ನಿಸಿರುವ ಘಟನೆ ತಾಲೂಕಿನ ಗೋಣಿಬೀಡು ಪೊಲೀಸ್‌ ಠಾಣೆ ವ್ಯಾಪ್ತಿಯ ಹಿರೇಶಿಗರ ಗ್ರಾಮದಲ್ಲಿ ಬುಧವಾರ ಬೆಳಕಿಗೆ ಬಂದಿದೆ.ಹಾಸನ ಮಾರ್ಗವಾಗಿ ಮಂಗಳೂರಿನಿಂದ ಬೆಂಗಳೂರಿಗೆ ಪೆಟ್ರೋಲ್‌ ಸಾಗಿಸುವ ಪೈಪ್‌ಲೈನ್‌ ಇದೆ.

ಇದರಲ್ಲಿ ಸುಮಾರು 2 ಸಾವಿರ ಲೀಟರ್‌ ಪೆಟ್ರೋಲ್‌ ಕಡಿಮೆ ಪ್ರಮಾಣದಲ್ಲಿ ಬರುತ್ತಿದೆ ಎಂದು ಎಂಆರ್‌ಪಿಎಲ್‌ ಕಂಪನಿಯವರಿಗೆ ಗೊತ್ತಾಗಿದೆ. ಹೀಗಾಗಿ ಕಂಪನಿ ಅಧಿಕಾರಿಗಳು ಗೋಣಿಬೀಡು ಪೊಲೀಸರ ಸಹಾಯ ಪಡೆದು ಪರಿಶೀಲಿಸಿದ್ದಾರೆ.

ಈ ಸಂದರ್ಭ ತಾಲೂಕಿನ ಹಿರೇಶಿಗರ ಬಳಿ ನಂಬರ್‌ ಪ್ಲೇಟ್‌ ಇಲ್ಲದ ಪೆಟ್ರೋಲ್‌ ಸಾಗಿಸುವ ಟ್ಯಾಂಕರ್‌ ಕಂಡುಬಂದಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಲಾರಿ ಚಾಲಕ ಹಾಗೂ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.


ಟ್ಯಾಂಕರ್‌ನಲ್ಲಿ ಒಂದೂವರೆ ಸಾವಿರ ಲೀಟರ್‌ ಪೆಟ್ರೋಲ್!


ಲಾರಿಯೊಳಗೆ ಸುಮಾರು ಒಂದೂವರೆ ಸಾವಿರ ಲೀಟರ್‌ ಪೆಟ್ರೋಲ್‌ ಇತ್ತೆಂದು ಹೇಳಲಾಗುತ್ತಿದ್ದು, ಎಲ್ಲಿ ಕೃತ್ಯ ನಡೆದಿದೆ, ಪ್ರಕರಣದಲ್ಲಿ ಯಾರು ಭಾಗಿಯಾಗಿದ್ದಾರೆ ಮತ್ತು ಹೇಗೆ ಕಳವು ಮಾಡುತ್ತಿದ್ದರು ಎಂಬುದು ಇನ್ನಷ್ಟೇ ಬೆಳಕಿಗೆ ಬರಬೇಕಿದೆ.

ಕೃತ್ಯಕ್ಕೆ ಬಳಸಿರುವ ಲಾರಿ ಮತ್ತು ಪೈಪ್‌ ಪರಿಕರಗಳನ್ನು ಗೋಣಿಬೀಡು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕಳ್ಳತನ ಪ್ರಕರಣದಲ್ಲಿ ಕೆಲ ಸ್ಥಳೀಯರು ಪಾಲ್ಗೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಗೋಣಿಬೀಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್‌ಐ ಹರ್ಷವರ್ಧನ್‌ ಅವರ ನೇತೃತ್ವದಲ್ಲಿ ಆರೋಪಿಗಳಿಗಾಗಿ ಬಲೆ ಬೀಸಲಾಗಿದೆ.

ಕಂಪನಿ ಸಿಬ್ಬಂದಿ ಗಸ್ತು ತಿರುಗುತ್ತಿದ್ದರೂ ಪೆಟ್ರೋಲ್‌ ಕಳ್ಳತನ ಆಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಹಿಂದೆಯೂ ಹಲವು ಬಾರಿ ಪೆಟ್ರೋಲ್‌ ಕಳ್ಳತನ ಪ್ರಕರಣಗಳು ನಡೆದಿದ್ದವು. ಹುರುಡಿ, ಗೌಡಹಳ್ಳಿ, ಅರೆಹಳ್ಳಿ ಬಳಿ ಪೈಪ್‌ಲೈನ್‌ ಕೊರೆದು ಕಳ್ಳತನ ಮಾಡಿದ್ದ ಪ್ರಕರಣ ನಡೆದಿದ್ದವು.

ಕಳೆದ ಸುಮಾರು 15 ವರ್ಷಗಳ ಹಿಂದೆ ಹಿರೇಶಿಗರ ಬಳಿ ತೈಲ ಮಾಫಿಯಾ ನಡೆದಿತ್ತು. ಅಂದಿನ ಡಿವೈಎಸ್‌ಪಿ ವೇದಮೂರ್ತಿ ಪ್ರಕರಣ ಭೇದಿಸಿದ್ದರು. ಮೂಡಿಗೆರೆ ಹಾಗೂ ಚಿಕ್ಕಮಗಳೂರಿನ ಅಂದಿನ ಸಿಪಿಐ ಹಾಗೂ ಗೊಣಿಬೀಡು ಪಿಎಸ್‌ಐ ಪ್ರಕರಣದಲ್ಲಿ ಭಾಗಿಯಾಗಿದ್ದು, ಮೂವರನ್ನು ಅಮಾನತು ಮಾಡಲಾಗಿತ್ತು. ಇದೀಗ ಮತ್ತೆ ತೈಲ ಮಾಫಿಯಾ ನಡೆದಿದೆ ಎಂದು ಶಂಕಿಸಲಾಗಿದ್ದು, ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಮೂಡಿಗೆರೆ ತಾಲೂಕಿನ ಹಿರೇಶಿಗರ ಗ್ರಾಮದಲ್ಲಿ ಪೈಪ್‌ ಕೊರೆದು ಪೆಟ್ರೋಲ್‌ ಕಳ್ಳತನಕ್ಕೆ ಯತ್ನಿಸಿದವರಿಂದ ಪರಿಕರಗಳನ್ನು, ಕಳ್ಳತನಕ್ಕೆ ಯತ್ನಿಸಿದ ಟ್ಯಾಂಕರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!