ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ (Chief Justice of India DY Chandrachud), ಈ ಹೆಸರನ್ನ ಕೇಳದವರು ಯಾರೂ ಇಲ್ಲ. ಅವರು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ಕೊಟ್ಟ ತೀರ್ಪುಗಳ (Judgement) ಮೂಲಕ ಸುದ್ದಿಯಾಗಿದ್ದರು..

ಅಲ್ಲದೇ, ಇತ್ತೀಚೆಗೆ ಅವರಿಗೆ ಸರ್ಕಾರ (Government) ಕೊಟ್ಟ ಬಂಗಲೆಯನ್ನ ಖಾಲಿ ಮಾಡುವ ವಿಚಾರವಾಗಿ ಮತ್ತೆ ಸುದ್ದಿಯಾಗಿದ್ದ ಅವರು, ಎಲ್ಲಾ ಟೀಕೆಗಳಿಗೆ ಉತ್ತರ ನೀಡಿದ್ದಾರೆ.

ಮನೆ ಹುಡುಕಲು ಕಷ್ಟವಾಯಿತು ಎಂದ ಚಂದ್ರಚೂಡ್
ಮನೆ ಖಾಲಿ ಮಾಡುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಚಂದ್ರಚೂಡ್‌ ಅವರು ನಮಗೆ ಬಹಳ ವಿಶೇಷವಾದ ಮನೆಯ ಅಗತ್ಯವಿತ್ತು. ತಮ್ಮ ಹೆಣ್ಣುಮಕ್ಕಳಿಗೆ ಸೂಕ್ತವಾದ ಮನೆಯನ್ನ ಹುಡುಕುವಲ್ಲಿ ಅನೇಕ ಸವಾಲುಗಳು ಹಾಗೂ ಸಮಸ್ಯೆಗಳು ಎದುರಾಗಿದ್ದವು ಎಂದು ಹೇಳಿಕೊಂಡಿದ್ದಾರೆ. ಇನ್ನು ಚಂದ್ರಚೂಡ್‌ ಅವರ ಇಬ್ಬರು ಹೆಣ್ಣುಮಕ್ಕಳು ಅಸ್ಥಿಪಂಜರದ ಸ್ನಾಯುಗಳ ಮೇಲೆ ಪರಿಣಾಮ ಬೀರುವ ನೆಮಲಿನ್ ಮಯೋಪತಿ ಎಂಬ ಅಪರೂಪದ ಆನುವಂಶಿಕ ಕಾಯಿಲೆಯಿಂದ ಬಳಲುತ್ತಿದ್ದು, ಇದರಿಂದಾಗಿ ಇಬ್ಬರೂ ವ್ಹೀಲ್‌ ಚೇರ್‌ ಮೇಲೆಯೇ ಇರುತ್ತಾರೆ. ಹಾಗಾಗಿ ಅವರಿಬ್ಬರಿಗೂ ಸರಿಯಾಗುವ ಹಾಗೆ ಮನೆ ಹುಡುಕಲು ಸಮಯ ಬೇಕಾಯಿತು ಹೊರತು ನನಗೆ ಸಾರ್ವಜನಿಕ ಜವಾಬ್ದಾರಿಗಳ ಬಗ್ಗೆ ಅರಿವಿದೆ ಹಾಗೂ ಸರ್ಕಾರಿ ಮನೆಯನ್ನ ಉಳಿಸಿಕೊಳ್ಳುವ ಯಾವುದೇ ಉದ್ದೇಶ ಇಲ್ಲ ಎಂದು ಹೇಳಿದ್ದಾರೆ.

ತಮ್ಮ ಪುತ್ರಿಯರಾದ ಪ್ರಿಯಾಂಕಾ ಮತ್ತು ಮಾಹಿ ಬಗ್ಗೆ ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ನೆಮಲಿನ್ ಮಯೋಪತಿ ಸಮಸ್ಯೆಯು ಸ್ನಾಯುಗಳ ಮೇಲೆ ಮಾತ್ರವಲ್ಲದೇ ಉಸಿರಾಟ ವ್ಯವಸ್ಥೆಯ ಮೇಲೆ ಸಹ ಪರಿಣಾಮ ಬೀರುತ್ತದೆ. ಇದರಿಂದಾಗಿ ಮಾತಿಗೆ ಸಂಬಂಧಿಸಿದ ಸಮಸ್ಯೆ ಸಹ ಬರಬಹುದು ಎಂದು ಅನೇಕ ವಿಚಾರಗಳನ್ನ ಹಂಚಿಕೊಂಡಿದ್ದಾರೆ.

ಚಂದ್ರಚೂಡ್‌ ಅವರನ್ನ ಟ್ರೋಲ್‌ ಮಾಡಿದ್ದ ಜನ
ನವೆಂಬರ್‌ನಲ್ಲಿ ನಿವೃತ್ತರಾದ ನ್ಯಾಯಮೂರ್ತಿ ಚಂದ್ರಚೂಡ್ ಅವರು ಮುಖ್ಯ ನ್ಯಾಯಮೂರ್ತಿಗಳ ಅಧಿಕೃತ ನಿವಾಸವನ್ನು ಖಾಲಿ ಮಾಡಿರಲಿಲ್ಲ. ಹಾಗಾಗಿ ಈ ಬಗ್ಗೆ ಗಮನ ನೀಡುವಂತೆ ಹಾಗೂ ಆದಷ್ಟು ಬೇಗ ಖಾಲಿ ಮಾಡಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ಒತ್ತಾಯಿಸಿತ್ತು. ಈ ವಿಚಾರವಾಗಿ ಅನೇಕ ಜನರು ಚಂದ್ರಚೂಡ್ ಅವರನ್ನ ಟ್ರೋಲ್‌ ಮಾಡಿದ್ದರು. ತೆರಿಗೆದಾರರ ಹಣದಿಂದ ಅವರು ಮಜಾ ಮಾಡುತ್ತಿದ್ದಾರೆ ಎಂಬೆಲ್ಲಾ ರೀತಿಯಾಗಿ ಅವರನ್ನ ಟ್ರೋಲ್‌ ಮಾಡಿದ್ದರು.

ಇನ್ನು ಸಾಧ್ಯವಾದಷ್ಟು ಬೇಗ ಬೇರೆ ಮನೆಗೆ ಹೋಗಲು ಪ್ರಯತ್ನಗಳನ್ನ ಮಾಡುತ್ತಿದ್ದೇನೆ. ಈ ಬಗ್ಗೆ ಸುಪ್ರೀಂ ಕೋರ್ಟ್ ಹಾಗೂ ಕೇಂದ್ರ ಸರ್ಕಾರಕ್ಕೆ ತಿಳಿಸಿದ್ದೇನೆ. ನಾನು ಬಾಡಿಗೆ ಮನೆ ಪಡೆಯಲು ಸಹ ಪ್ರಯತ್ನ ಮಾಡಿದೆ. ಆದರೆ ಕಡಿಮೆ ಅವಧಿಗೆ ಯಾರೂ ಮನೆಯನ್ನು ಬಾಡಿಗೆಗೆ ನೀಡಲು ಒಪ್ಪಿಕೊಳ್ಳುತ್ತಿಲ್ಲ ಎಂದಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!