ತೀವ್ರ ಜ್ವರದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದ ಶಾಲಾ ಬಾಲಕಿಗೆ ವೈದ್ಯಾಧಿಕಾರಿ ಯೊಬ್ಬರು ಗರ್ಭಿಣಿ ಎಂದು ವರದಿ ನೀಡಿ ಎಡವಟ್ಟು ಮಾಡಿಕೊಂಡ ಘಟನೆ ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.

ವೈದ್ಯಾಧಿಕಾರಿಯು ಈ ವಿಚಾರವನ್ನು ಆಶಾ ಕಾರ್ಯಕರ್ತರು, ಆಸ್ಪತ್ರೆಯ ಸಿಬ್ಬಂದಿ ಹಾಗೂ ಇತರರಿಗೆ ಹೇಳಿದ್ದು, ಈ ಸುಳ್ಳು ಮಾಹಿತಿ ಸಾರ್ವಜನಿಕವಾಗಿ ಹರಡಿದ ಕಾರಣ ನಮ್ಮ ಕುಟುಂಬಕ್ಕೆ ಭಾರೀ ಮಾನಸಿಕ ನೋವನ್ನುಂಟು ಮಾಡಿದೆ.

ನನ್ನ ಮಗಳು ಈಗ ಶಾಲೆಗೆ ಹೋಗಲು ನಿರಾಕರಿಸುತ್ತಿದ್ದಾಳೆ ಎಂದು ಜಿಲ್ಲಾ ಆರೋಗ್ಯಾಧಿಕಾರಿಗೆ ಬಾಲಕಿಯ ಹೆತ್ತವರು ದಾಖಲೆಯೊಂದಿಗೆ ದೂರು ನೀಡಿದ್ದಾರೆ.

ಶಾಲೆಯ ಸಹಪಾಠಿಗಳು, ಶಿಕ್ಷಕರು ಮತ್ತು ಸ್ಥಳೀಯರು ಈ ಕುರಿತು ಮಾತು ಮಾತಿನಲ್ಲಿ ಬಾಲಕಿಯನ್ನು ಮಾನಹಾನಿ ಮಾಡುತ್ತಿದ್ದಾರೆ. ಅಪ್ರಾಪ್ತ ಮಗಳಿಗೆ ತಪ್ಪು ವೈದ್ಯಕೀಯ ಮಾಹಿತಿ ನೀಡುವುದು ಹಾಗೂ ಅವಳ ಖಾಸಗಿ ಮಾಹಿತಿಯನ್ನು ಅನಧಿಕೃತವಾಗಿ ಬಹಿರಂಗಪಡಿಸುವುದು ಪೋಕ್ಸೋ ಕಾಯಿದೆ ಹಾಗೂ ಐ.ಪಿ.ಸಿ. ಸೆಕ್ಷನ್ ಗಳ ಅಡಿಯಲ್ಲಿ ಗಂಭೀರ ಅಪರಾಧವಾಗಿರುತ್ತದೆ. ವೈದ್ಯಾಧಿಕಾರಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಬಾಲಕಿಯ ತಂದೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಘಟನೆಯ ಹಿನ್ನೆಲೆ:

ಕಡಬ ತಾಲೂಕಿಗೆ ಒಳಪಟ್ಟ ಗ್ರಾಮವೊಂದರ 13 ವರ್ಷದ ಬಾಲಕಿಯನ್ನು ಜ್ವರದ ಹಿನ್ನೆಲೆ ಆಕೆಯ ಹೆತ್ತವರು ಚಿಕಿತ್ಸೆಗಾಗಿ ಜುಲೈ 1 ರಂದು ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದಿದ್ದರು. ಅಲ್ಲಿನ ಕರ್ತವ್ಯನಿರತ ವೈದ್ಯಾಧಿಕಾರಿ  ಅವರು ಬಾಲಕಿಯನ್ನು ತಪಾಸಣೆ ಮಾಡಿ ಮೂತ್ರ ಮತ್ತು ರಕ್ತ ಪರೀಕ್ಷೆಗೆ ಲ್ಯಾಬ್ ಸ್ಲಿಪ್ ನೀಡಿದ್ದರು. ತಪಾಸಣೆಯ ನಂತರ ಹೊರ ರೋಗಿಗಳ ದಾಖಲಾತಿಯಲ್ಲಿ ಯುಪಿಟಿ ಪಾಸಿಟಿವ್ (ಗರ್ಭಿಣಿ) ಎಂದು ಬರೆದಿದ್ದು ಇನ್ನಷ್ಟು ತಪಾಸಣೆಗಾಗಿ ಸುಳ್ಯ ಸರಕಾರಿ ಆಸ್ಪತ್ರೆಗೆ ರೆಫರ್ ಮಾಡಿದ್ದರು. ಈ ವರದಿಯಿಂದ ತಬ್ಬಿಬ್ಬುಗೊಂಡ ಹೆತ್ತವರು ಬಾಲಕಿಯನ್ನು ಖಾಸಗಿ ಆಸ್ಪತ್ರೆಗೆ ಹೋಗಿ ಹೆಚ್ಚಿನ ಪರೀಕ್ಷೆ ಮಾಡಿಸಿದಾಗ ಮಗಳು ಗರ್ಭಿಣಿಯಾಗಿಲ್ಲ ಎಂಬ ವರದಿ ಲಭಿಸಿತ್ತು. ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದೊಯ್ದು ಪರೀಕ್ಷಿಸಿದಾಗ ಅಲ್ಲಿಯ ವೈದ್ಯರೂ ಕೂಡಾ ಗರ್ಭಧಾರಣೆಯ ಕುರಿತು ಯಾವುದೇ ದೃಢೀಕರಣ ನೀಡಿಲ್ಲ ಎಂದು ತಿಳಿದುಬಂದಿದೆ.

ದೂರಿನ ಬೆನ್ನಲ್ಲೇ ಪರಿಶೀಲನೆಗೆ ಬಂದ ಅಧಿಕಾರಿಗಳ ತಂಡ:-

ದೂರಿನ ಗಂಭೀರತೆ ಅರಿತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಹೆಚ್ ಆರ್ ತಿಮ್ಮಯ್ಯ ಅವರು ತನಿಖೆಗಾಗಿ ತಂಡವನ್ನು ರಚಿಸಿ ಪಂಜಕ್ಕೆ ಕಳುಹಿಸಿದ್ದು, ಜುಲೈ10 ರಂದು ಮಾಹಿತಿ ಸಂಗ್ರಹಿಸಿದ್ದಾರೆ. ಆರ್.ಸಿ.ಎಚ್ ( ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ವಿಭಾಗದ ಡಾ ರಾಜೇಶ್, ಜಿಲ್ಲಾ ಕ್ಷಯ ರೋಗ ನಿವಾರಣಾಧಿಕಾರಿ ಡಾ. ದಿಲ್ಷಾದ್ , ಜಿಲ್ಲಾ ಶುಶ್ರೂಷಣಾಧಿಕಾರಿ ಜೆಸಿ ಕೆ.ವಿ , ತಾಲೂಕು ಆರೋಗ್ಯಾಧಿಕಾರಿ ತ್ರಿಮೂರ್ತಿ ತಂಡದಲ್ಲಿದ್ದರು.

ಪೊಲೀಸರಿಗೂ ದೂರು:-

ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ದಲಿತ ದೌರ್ಜನ್ಯ ಪ್ರಕರಣದ ಅಡಿಯಲ್ಲಿ ಕೇಸು ದಾಖಲಿಸಬೇಕೆಂದು ದೂರಿನಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!