ಮಂಗಳೂರು: ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ಥ ಮಹಿಳೆಯೊಬ್ಬರು ನೀಡಿದ ದೂರಿನ ಮೇರೆಗೆ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಂತ್ರಸ್ಥೆಯ ಗಂಡ ಹಾಗೂ ಕಾವೂರು ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಚಂದ್ರನಾಯ್ಕ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
2025ರ ಜುಲೈ 15ರಂದು ಮಹಿಳೆ ಠಾಣೆಗೆ ಹಾಜರಾಗಿ ನೀಡಿದ ದೂರಿನಲ್ಲಿ, ತನ್ನ ಗಂಡನು ಹಣಕ್ಕಾಗಿ ಒತ್ತಾಯಪೂರ್ವಕವಾಗಿ ಬೇರೊಬ್ಬ ಪುರುಷನೊಂದಿಗೆ ದೈಹಿಕ ಸಂಪರ್ಕ ಹೊಂದುವಂತೆ ಬೇಡಿಕೆ ಇಟ್ಟಿದ್ದು, ಅದರ ವಿಡಿಯೋವನ್ನು ಚಿತ್ರೀಕರಿಸಿ, ಇತರರೊಂದಿಗೆ ಸಹ ದೈಹಿಕ ಸಂಪರ್ಕ ಹೊಂದದಿದ್ದರೆ ಆ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರ ಮಾಡುವ ಬೆದರಿಕೆ ನೀಡಿದ್ದಾನೆ ಎಂದು ಆರೋಪಿಸಿದ್ದಾರೆ.
ಇದಲ್ಲದೇ, ಮಹಿಳೆ ತನ್ನ ಪರಿಚಯದ ಕಾವೂರು ಠಾಣೆಯ ಪೊಲೀಸ್ ಕಾನ್ಸ್ಟೇಬಲ್ ಚಂದ್ರನಾಯ್ಕ್ ಅವರಿಗೆ ಈ ಬಗ್ಗೆ ತಿಳಿಸಿದಾಗ, ಅವರು ಸಂತ್ರಸ್ಥೆಯ ಮನೆಗೆ ಬಂದು ಗಂಡನ ಮೊಬೈಲ್‌ನಲ್ಲಿ ಇರುವ ದೃಶ್ಯಗಳನ್ನು ಅಳಿಸಿದರೂ, ನಂತರ ಗಂಡನ ಪ್ರೇರಣೆಯಂತೆ ಮಹಿಳೆಯೊಂದಿಗೆ ಅವಳ ಇಚ್ಚೆಯ ವಿರುದ್ಧ ದೈಹಿಕ ಸಂಬಂಧ ಬೆಳೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.













