
ಕಡಬ, ಜುಲೈ 17: ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಅಲಂಪಾಡಿಯಲ್ಲಿ ಸೋದರರ ನಡುವಿನ ವೈಮನಸ್ಸು ಕೆರಳಿದ್ದು, ಅದು ಹಲ್ಲೆಗೆ ಕಾರಣವಾಗಿದೆ. ಈಘಟನೆಯಲ್ಲಿ ಓರ್ವ ಸಹೋದರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಂಗಳವಾರ ನಡೆದಿದೆ.
ಕೌಕ್ರಾಡಿ ಗ್ರಾಮದ ನಿವಾಸಿ ರಾಜಶೇಖರ್ ಎಂಬವರು ಹಲ್ಲೆಗೆ ಒಳಗಾದ ವ್ಯಕ್ತಿಯಾಗಿದ್ದಾರೆ. ಅವರು ಕಡಬ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ, ತಮ್ಮ ಸಹೋದರ ಮನೋಜ್ ಕುಮಾರ್ ಮತ್ತು ಜಯರಾಜ್ ಎಂಬವರು ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.
ದೂರು ವಿವರಿಸಿದಂತೆ, ಮಂಗಳವಾರ ರಾಜಶೇಖರ್ ಅವರು ತಮ್ಮ ನಿವಾಸದಲ್ಲಿದ್ದಾಗ, ಸಹೋದರ ಮನೋಜ್ ಕುಮಾರ್ ಅಲ್ಲಿಗೆ ಬಂದು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುತ್ತಿದ್ದ. ಈ ವೇಳೆ ಇನ್ನೊಬ್ಬ ಸಹೋದರಾದ ಜಯರಾಜ್ ಕತ್ತಿ ಹಿಡಿದು ರಾಜಶೇಖರ್ ಅವರ ಮೇಲೆ ದಾಳಿ ನಡೆಸಿದ ಎನ್ನಲಾಗಿದೆ.
ಈ ಘಟನೆಯಿಂದ ರಾಜಶೇಖರ್ ಅವರಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರ ವೈದ್ಯಕೀಯ ಸ್ಥಿತಿ ಸ್ಥಿರವಾಗಿರುವುದಾಗಿ ಆಸ್ಪತ್ರೆ ಮೂಲಗಳು ತಿಳಿಸಿವೆ.
ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿಗಳ ಪತ್ತೆಗಾಗಿ ತನಿಖೆ ಆರಂಭಿಸಿದ್ದಾರೆ. ಕುಟುಂಬದಲ್ಲಿ ಹಳೆ ವೈಷಮ್ಯ ಈ ಘಟನೆಯ ಹಿಂದಿನ ಕಾರಣವೆಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಪೊಲೀಸರಿಂದ ತನಿಖೆ ಮುಂದುವರಿದಿದೆ.






