
ಮಂಗಳೂರು, ಜುಲೈ 27:ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2014ರಲ್ಲಿ ನಡೆದ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ 2015ರಿಂದ ಪರಾರಿಯಾಗಿದ್ದ ಭೂಗತ ಪಾತಕಿ ರವಿ ಪೂಜಾರಿ ಸಹಚರನನ್ನು ಪಂಡರಪುರ (ಮಹಾರಾಷ್ಟ್ರ)ದಲ್ಲಿ ಉರ್ವಾ ಪೊಲೀಸ್ ಠಾಣೆಯ ತಂಡ ಬಂಧಿಸಿದೆ.
2014ರಲ್ಲಿ ಬಿಜೈ ಭಾಗದಲ್ಲಿರುವ ಭಾರತಿ ಬಿಲ್ಡರ್ಸ್ ಕಛೇರಿಯಲ್ಲಿ ನಡೆದ ಶೂಟೌಟ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಉರ್ವಾ ಪೊಲೀಸ್ ಠಾಣೆಯಲ್ಲಿ ಕ್ರ.ಸಂಖ್ಯೆ 23/2014 ಅಡಿಯಲ್ಲಿ IPC ಕಲಂ 447, 120(B), 307 ಹಾಗೂ Arms Act 27 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ಪ್ರಮುಖ ಆರೋಪಿಯಾದ ಮಹಾರಾಷ್ಟ್ರದ ಕರಾಡ್ ಮೂಲದ ಗಣೇಶ್ ಲಕ್ಷ್ಮಣ್ ಸಕಟ್ 2015ರಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ.
ಈ ಹಿನ್ನೆಲೆಯಲ್ಲಿ ಮಂಗಳೂರು ಜೆಎಂಎಫ್‌ಸಿ 3ನೇ ನ್ಯಾಯಾಲಯವು ಆರೋಪಿಯ ವಿರುದ್ದ ವಾರಂಟ್ ಹೊರಡಿಸಿದ್ದು, ಮಾನ್ಯ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ಉರ್ವಾ ಠಾಣೆಯ ನಿರೀಕ್ಷಕರ ತಂಡ ಎಎಸ್ಐ ವೇಣುಗೋಪಾಲ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಹೆಡ್ ಕಾನ್ಸ್‌ಟೆಬಲ್ 949 ಪ್ರಮೋದ್, 956 ನಾರಾಯಣ ಹಾಗೂ 622 ಗೋವಿಂದರಾಜ್ ಅವರು ಕಾರ್ಯಾಚರಣೆ ನಡೆಸಿ ಪಂಡರಪುರದಲ್ಲಿಯೇ ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತನನ್ನು ಜುಲೈ 27ರಂದು ಮಂಗಳೂರಿನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಬಂಧಿತನ ವಿರುದ್ಧ ಕಾವುರು ಪೊಲೀಸ್ ಠಾಣೆಯಲ್ಲಿ ನಂ. 44/2014ರಡಿಯಲ್ಲಿ IPC ಕಲಂ 448, 507, 120(B) ಜೊತೆಗೆ 34ರ ಅಡಿಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದ್ದು, ಈ ಸಂಬಂಧವೂ ನ್ಯಾಯಾಲಯದಿಂದ ವಾರಂಟ್ ಜಾರಿಯಾಗಿದೆ. ಅಲ್ಲದೆ, ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಕರಾಡ್ ನಲ್ಲಿ ಕೂಡ Arms Act ಅಡಿಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.






