ವಿಟ್ಲ: ಕೆಲಸಕ್ಕಾಗಿ ತೆರಳಿದ ಬಳಿಕ ನಾಪತ್ತೆಯಾಗಿದ್ದ ಬಂಟ್ವಾಳ ತಾಲೂಕು ಕಡೇಶಿವಾಲಯ ಗ್ರಾಮದ ಕೊರತಿಗುರಿ ನಿವಾಸಿ ಯುವಕನೊಬ್ಬನ ದ್ವಿಚಕ್ರ ವಾಹನ ಹಾಗೂ ಮೊಬೈಲ್ ಫೋನ್ ಜು.29 ರಂದು ಬಂಟ್ವಾಳ ನಗರ ಠಾಣಾ ವ್ಯಾಪ್ತಿಯ ಬಡ್ಡಕಟ್ಟೆ ಸಮೀಪದ ಜಕ್ರಿಬೆಟ್ಟು ಡ್ಯಾಂ ಬಳಿ ಅನಾಥವಾಗಿ ಪತ್ತೆಯಾಗಿದೆ.

ಜು.28 ರಂದು ಪರೆಂಗಿಪೇಟೆಗೆ ಕೆಲಸದ ನಿಮಿತ್ತ ತೆರಳಿದ್ದ ಹೇಮಂತ್ ಆಚಾರ್ಯ (ಪುತ್ರ: ಜಗದೀಶ್ ಆಚಾರ್ಯ) ಎಂಬ ಯುವಕ ನಂತರ ಮನೆಗೆ ವಾಪಾಸು ಬಾರದ ಹಿನ್ನೆಲೆಯಲ್ಲಿ ಆತ ನಾಪತ್ತೆಯಾಗಿದ್ದ. ಆತ ಅವಿವಾಹಿತನಾಗಿದ್ದು, ನೀರಿನ ಫಿಲ್ಟರ್‌ ರಿಪೇರಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

ಮನೆಮಂದಿಯವರು ನಾಪತ್ತೆಯಾಗಿ ಹುಡುಕಾಟ ನಡೆಸಿದರೂ ಯಾವ ಮಾಹಿತಿಯೂ ದೊರಕದ ಹಿನ್ನೆಲೆಯಲ್ಲಿ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಜು.29ರಂದು ದೂರು ನೀಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದರು.

ಈ ಮಧ್ಯೆ ಹೇಮಂತ್ ಚಲಾಯಿಸುತ್ತಿದ್ದ ದ್ವಿಚಕ್ರ ವಾಹನ ಹಾಗೂ ಆತನ ಮೊಬೈಲ್ ಫೋನ್ ಜಕ್ರಿಬೆಟ್ಟು ಡ್ಯಾಂ ಬಳಿ ಪತ್ತೆಯಾಗಿದೆ. ಘಟನೆ ಕುರಿತು ಮಾಹಿತಿ ಪಡೆದ ಬಂಟ್ವಾಳ ನಗರ ಠಾಣೆಯ ಎಸ್‌ಐ ಸಂದೀಪ್ ಕುಮಾರ್ ಶೆಟ್ಟಿಯವರ ನೇತೃತ್ವದಲ್ಲಿ ಪೊಲೀಸ್ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ಅಗ್ನಿಶಾಮಕ ದಳ ಹಾಗೂ ನುರಿತ ಈಜುಗಾರರ ಸಹಾಯದಿಂದ ನೇತ್ರಾವತಿ ನದಿಯಲ್ಲಿ ಶೋಧ ಕಾರ್ಯ ಆರಂಭಿಸಲಾಗಿದ್ದು, ರಾತ್ರಿ ವಾತಾವರಣದ ಕಾರಣದಿಂದ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಶೋಧ ಕಾರ್ಯ ಮುಂದುವರಿಯಲಿದೆ.

ಘಟನೆ ಸಂಬಂಧ ಹೆಚ್ಚಿನ ಮಾಹಿತಿ ನಿರೀಕ್ಷೆಯಲ್ಲಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!