
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಉದ್ದಿಮೆ ಪರವಾನಿಗೆ ಹಾಗೂ ಆಸ್ತಿ ತೆರಿಗೆ ರಶೀದಿಗಳ ನಕಲಿ ಸೃಷ್ಠಿ ಮಾಡಿ ವಂಚನೆ ಎಸಗಿದ ಪ್ರಕರಣದಲ್ಲಿ ಪ್ರಮುಖ ಆರೋಪಿ ಪೃಥ್ವಿರಾಜ್ ಶೆಟ್ಟಿ (25) ಎಂಬಾತನನ್ನು ಕಂಕನಾಡಿ ನಗರ ಪೊಲೀಸ್ ಠಾಣೆ ಪೊಲೀಸರು ಜುಲೈ 25ರಂದು ಬಂಧಿಸಿದ್ದಾರೆ.
ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ “ಶ್ರೀ ರಾಜ ದುರ್ಗಾ ಫರ್ನಿಚರ್ ವರ್ಕ್ಸ್” ಎಂಬ ಉದ್ದಿಮೆ ಹೊಂದಿರುವ ಬಾಲಕೃಷ್ಣ ಸುವರ್ಣ ಎಂಬವರು ನ್ಯಾಯಾಲಯದ ವ್ಯವಹಾರದ ನಿಮಿತ್ತ ಪಾಲಿಕೆಗೆ ದಾಖಲೆ ಪಡೆಯಲು ಭೇಟಿ ನೀಡಿದ ವೇಳೆ, ತಮ್ಮ ಉದ್ದಿಮೆ ಪರವಾನಿಗೆ ಹಾಗೂ ಆಸ್ತಿ ತೆರಿಗೆ ನವೀಕರಿಸಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಬಾಲಕೃಷ್ಣ ಅವರ ಬಳಿ ವರ್ತಮಾನ ಉದ್ದಿಮೆ ಪರವಾನಿಗೆ ಮತ್ತು ಆಸ್ತಿ ತೆರಿಗೆ ರಶೀದಿಗಳು ಲಭ್ಯವಿದ್ದರಿಂದ, ತನಿಖೆ ನಡೆಸಿದಾಗ ಪೃಥ್ವಿರಾಜ್ ಶೆಟ್ಟಿ ಎಂಬಾತನು ₹27,990 ಹಣ ಪಡೆದುಕೊಂಡು ನಕಲಿ ದಾಖಲೆಗಳನ್ನು ನೀಡಿದ್ದಾನೆಂಬುದು ಬಯಲಾಗಿದೆ.
ಈ ಸಂಬಂಧ ಪಾಲಿಕೆಯ ಆಯುಕ್ತರು ನೀಡಿದ ಮಾಹಿತಿ ಮೇರೆಗೆ ಬಾಲಕೃಷ್ಣ ಸುವರ್ಣ ಅವರು ಕಂಕನಾಡಿ ನಗರ ಠಾಣೆಗೆ ದೂರು ನೀಡಿದ್ದಾರೆ. ಇದರೊಂದಿಗೆ, ಪಂಪ್‌ವೆಲ್‌ನಲ್ಲಿರುವ ಲಕ್ಷ್ಮಿ ಹಾರ್ಡ್‌ವೇರ್ ವರ್ಕ್ಸ್ ಮಾಲಿಕ ದೇವಾಂಗ್ ಕೆ. ಪಟೇಲ್ ಅವರೂ ಇದೇ ರೀತಿಯ ವಂಚನೆಯ ಬಗ್ಗೆ ಬರ್ಕೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ತಲೆಮರೆಸಿಕೊಂಡಿದ್ದ ಪೃಥ್ವಿರಾಜ್ ಶೆಟ್ಟಿಯು ವಿವಿಧ ಕೇರಳದ ಸ್ಥಳಗಳಲ್ಲಿ ಅಡಗುತ್ತಿದ್ದ ನಂತರ ಕಿನ್ನಿಗೋಳಿಗೆ ಆಗಮಿಸುತ್ತಿದ್ದ ಸಂದರ್ಭ ಪೊಲೀಸರು ಆತನನ್ನು ಬಂಧಿಸಿದ್ದಾರೆ. ತನಿಖೆ ವೇಳೆ ಆತ, ತನ್ನ ತಂದೆ ಗಣೇಶ್ ಶೆಟ್ಟಿ ಅವರು ದೇವಾಂಗ್ ಪಟೇಲ್ ಅವರ ಅಂಗಡಿಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದವರಾಗಿದ್ದು, ಅವರ ಅನಾರೋಗ್ಯದ ಬಳಿಕ 2004ರಿಂದ ಉದ್ಯಮದ ಲೆಕ್ಕಪತ್ರಗಳನ್ನು ನಿಭಾಯಿಸುತ್ತಿದ್ದೆನೆಂದು ಹೇಳಿದ್ದಾನೆ.
ಪೃಥ್ವಿರಾಜ್, ಉದ್ದಿಮೆದಾರರ ಮೊಬೈಲ್‌ಗಳಿಗೆ OTP ಪಡೆದು MCC ವೆಬ್‌ಸೈಟ್‌ಗೆ ಲಾಗಿನ್ ಆಗಿ ಹಿಂದಿನ ವರ್ಷದ ಪರವಾನಿಗೆ ಹಾಗೂ ತೆರಿಗೆ ರಶೀದಿಗಳನ್ನು ಡೌನ್‌ಲೋಡ್ ಮಾಡಿ, 3rd party ಅಪ್ಲಿಕೇಶನ್ ಬಳಸಿಕೊಂಡು ದಿನಾಂಕ ಹಾಗೂ ಇತರೆ ಮಾಹಿತಿಗಳನ್ನು ಬದಲಾಯಿಸಿ ನಕಲಿ ದಾಖಲೆಗಳನ್ನು ಸೃಷ್ಠಿಸಿದ್ದಾನೆ.
ಆತನಿಂದ ನಕಲಿ ದಾಖಲೆ ಸೃಷ್ಠಿಗೆ ಉಪಯೋಗಿಸಿದ ಸಲಕರಣೆಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ನ್ಯಾಯಾಲಯಕ್ಕೆ ಹಾಜರುಪಡಿಸಿದ ಆರೋಪಿಯು ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದು, ಇನ್ನು ಹೆಚ್ಚು ಮಂದಿಗೆ ವಂಚನೆ ಮಾಡಿರುವ ಶಂಕೆ ಹಿನ್ನೆಲೆಯಲ್ಲಿ ಕಂಕನಾಡಿ ಮತ್ತು ಬರ್ಕೆ ಠಾಣೆಗಳಲ್ಲಿ ತನಿಖೆ ಮುಂದುವರೆದಿದೆ.






