
ಮಂಗಳೂರು: ಮಾದಕ ವಸ್ತುಗಳ ಅಕ್ರಮ ಸಾಗಣೆ ವಿರುದ್ಧ ಸಿಸಿಬಿ ಪೊಲೀಸರು ಕೈಗೊಂಡಿರುವ ಪರಿಣಾಮಕಾರಿಯ ಕಾರ್ಯಾಚರಣೆಯಲ್ಲಿ, 123 ಕೆಜಿ ಗಾಂಜಾ ಮತ್ತು ಅದನ್ನು ಸಾಗಿಸುತ್ತಿದ್ದ ಎರಡು ಕಾರುಗಳನ್ನು ವಶಪಡಿಸಿ, ಮೂವರು ಆರೋಪಿಗಳನ್ನು ಬಂಧಿಸಲು ಮಂಗಳೂರು ನಗರ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ದಿನಾಂಕ 31-07-2025 ರಂದು ಪಡೆದ ಖಚಿತ ಮಾಹಿತಿ ಮೇರೆಗೆ, ಮೂಡಬಿದಿರೆ ತಾಲೂಕಿನ ಬೆಳುವಾಯಿ ಗ್ರಾಮದ ಕಾಂತಾವರ ಕ್ರಾಸ್‌ನ ಮಠದಕೆರೆ ಎಂಬಲ್ಲಿ ದಾಳಿ ನಡೆಸಿದ ಸಿಸಿಬಿ ತಂಡವು, ಗಾಂಜಾ ಸಾಗಾಟ ಮಾಡುತ್ತಿದ್ದ KA-21-P-9084 ಮತ್ತು KL-14-AF-7010 ನಂಬರ್‌ಗಳ ಎರಡು ಕಾರುಗಳನ್ನು ಪತ್ತೆ ಹಚ್ಚಿ ಪರಿಶೀಲನೆ ನಡೆಸಿದಾಗ, 123 ಕೆಜಿ ಗಾಂಜಾ, 5 ಮೊಬೈಲ್ ಫೋನ್‌ಗಳು ಹಾಗೂ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಲಾದ ಒಟ್ಟು ಸೊತ್ತಿನ ಮೌಲ್ಯವನ್ನು ಸುಮಾರು ₹46.2 ಲಕ್ಷ ಎಂದು ಅಂದಾಜಿಸಲಾಗಿದೆ.
ಬಂಧಿತ ಆರೋಪಿಗಳು:
1. ಮಸೂದ್ ಎಂಕೆ (45) – ಆಡೂರು, ಕಾಸರಗೋಡು
2. ಮೊಹಮ್ಮದ್ ಆಶಿಕ್ (24) – ಪರಪ್ಪ ದೇಲಂಪಾಡಿ, ಕಾಸರಗೋಡು
3. ಸುಬೇರ್ (30) – ಪರಪ್ಪ ದೇಲಂಪಾಡಿ, ಕಾಸರಗೋಡು
ಮೂವರೂ ಆಂಧ್ರಪ್ರದೇಶದಿಂದ ಗಾಂಜಾ ಸಾಗಾಟ ಮಾಡುತ್ತಿದ್ದಾಗ ಬಂಧನಕ್ಕೆ ಒಳಪಟ್ಟಿದ್ದಾರೆ. ಈ ಕುರಿತು ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಜರುಗುತ್ತಿದೆ.
ಮಂಗಳೂರು ನಗರ ಪೊಲೀಸರು ಮಾದಕ ವಸ್ತುಗಳ ವಿರೋಧಿ ಕಾರ್ಯಾಚರಣೆಗಳನ್ನು ಮುಂದುವರೆಸಿದ್ದು, ಈ ದಾಳಿಯಲ್ಲಿ ಸಿಸಿಬಿ ಘಟಕದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪ್ರಮುಖ ಪಾತ್ರ ವಹಿಸಿದ್ದಾರೆ.






